×
Ad

ಬಿಜೆಪಿ ಸರಕಾರದಿಂದ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ಎಂ . ದೇವದಾಸ್

Update: 2016-07-28 18:22 IST

ಮಂಗಳೂರು, ಜು.28: ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ . ದೇವದಾಸ್ ಹೇಳಿದರು.

ದ.ಕ ಜಿಲ್ಲಾಧಿಕಾರಿ ಕಚೇರಿಯೆದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯ ನೇತೃತ್ವದಲ್ಲಿ ಗುಜರಾತ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಬಿಎಸ್ಪಿ ಮುಖಂಡೆ ಮಾಯಾವತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವವರನ್ನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ನಡೆದ ಧರಣಿಯಲ್ಲಿ ಮಾತನಾಡಿದರು.

ದಲಿತರ ಮೇಲೆ ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದ ನಂತರ ನೆಮ್ಮದಿ ಜೀವನದ ನಿರೀಕ್ಷೆಯಲ್ಲಿದ್ದ ದಲಿತರ ಮೇಲೆ ಇಂದಿಗೂ ದೌರ್ಜನ್ಯ ಮುಂದುವರಿಯುತ್ತಿದೆ. ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರ ಒಂದೆಡೆ ಅಚ್ಛೇ ದಿನ್ ಎಂದು ಹೇಳುತ್ತಾ ಮತ್ತೊಂದೆಡೆ ದಲಿತ, ಮುಸ್ಲಿಮರ ಮೇಲೆ ನಿರಂತರ ಹಲ್ಲೆ ನಡೆಸುತ್ತಿದೆ. ವಲಸೆ ಬಂದ ಆರ್ಯ ಸಮಾಜ ಮನುವಾದ ಬಿತ್ತುವ ಮೂಲಕ ಕುತಂತ್ರ ನಡೆಸುತ್ತಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಕೊಡಲಿಯೇಟನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೆಂದ್ರ ನಾಯಕ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಎಐವೈಎಫ್ ಜಿಲ್ಲಾ ಮುಖಂಡ ಕರುಣಾಕರ್ ಎಂ, ಬಿಎಸ್ಪಿ ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು, ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್, ಆರ್‌ಟಿಐ ಕಾರ್ಯಕರ್ತ ದಿ.ವಿನಾಯಕ ಬಾಳಿಗಾರ ಸಹೋದರಿ ಹರ್ಷಾ ಬಾಳಿಗಾ, ತಂದೆ ರಾಮಚಂದ್ರ ಬಾಳಿಗಾ, ದಲಿತ ಮುಖಂಡರುಗಳಾದ ಟಿ.ಕೆ ರಾಜು, ರಘು ಕೆ.ಎಕ್ಕಾರ್, ಎಂ.ಭಾಸ್ಕರ್ ಶಿವಪ್ಪ ಸವಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News