ಬೆಳ್ತಂಗಡಿ: ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಜಿ.ಪಂ. ಸಿಇಒ
ಬೆಳ್ತಂಗಡಿ, ಜು.28: ಸಾರ್ವಜನಿಕರಿಗೆ ಸರಕಾರದ ಎಲ್ಲಾ ಯೋಜನೆಗಳ ಬಗ್ಗೆ ಸಕಾಲದಲ್ಲಿ ಮಾಹಿತಿ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಗುರುವಾರ ತಾಲೂಕು ಪಂ. ಕಚೇರಿಗೆ ಆಗಮಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶಿಲನೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಿದರು.
ತಾಲೂಕಿನ 10 ಶಾಲೆಗಳಲ್ಲಿ ಆರ್‌ಎಂಎಸ್ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. 2 ಕಾಮಗಾರಿ ಪೂರ್ಣಗೊಂಡಿದೆ. ಹೊಸತಾಗಿ ಆರಂಭವಾದ ಬಳೆಂಜ, ಬದನಾಜೆ, ಶಾಲೆತಡ್ಕ ಶಾಲೆಗಳಿಗೆ ಹೊಸ ಕಟ್ಟಡಗಳಿಗೆ ಮಂಜೂರಾಗಿದ್ದು ಇನ್ನೂ ಕಾಮಗಾರಿ ಆರಂಭ ಆಗಿಲ್ಲ. ತಾಲೂಕಿನಲ್ಲಿ 181 ಪ್ರಾಥಮಿಕ ಶಾಲೆಗಳ ಪೈಕಿ 41 ಶಾಲೆಗಳ ಹಳೆ ಕಟ್ಟಡಗಳ ದುರಸ್ತಿ ಆಗಬೇಕಾಗಿದೆ. ಅದರಲ್ಲಿ 21 ಶಾಲೆಗಳ ಕೊಠಡಿಗಳ ದುರಸ್ತಿ, 20 ಶಾಲೆಗಳ ಮೇಚ್ಛಾವಣಿ ದುರಸ್ತಿ, 14 ಶಾಲೆಗಳ ಶೌಚಾಲಯ ದುರಸ್ತಿ ನಡೆಯಬೇಕಾಗಿದೆ. ಮಕ್ಕಳ ಸಂಖ್ಯೆಗನುಗುಣವಾಗಿ 13 ಹೊಸ ಶೌಚಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
34 ಪ್ರೌಢಶಾಲೆಯ ಪೈಕಿ 21 ಶಾಲೆಗಳ ಹಳೆ ಕಟ್ಟಡಗಳ ದುರಸ್ತಿ ಆಗಬೇಕಾಗಿದೆ. ಅದರಲ್ಲಿ 21 ಕಟ್ಟಡಗಳ ಕೊಠಡಿ ಹಾಗೂ ಮೇಚ್ಛಾವಣಿ ದುರಸ್ತಿ, 19 ಶೌಚಾಲಯಗಳ ದುರಸ್ತಿಗೆ ಮನವಿ ಮಾಡಲಾಗಿದೆ. 10 ಹೊಸ ಶೌಚಾಲಯಕ್ಕೆ ಬೇಡಿಕೆ ಇಡಲಾಗಿದೆ. 15 ಶಾಲೆಗಳಿಗೆ ಪಹಣಿ ಪತ್ರ ಆಗಬೇಕಾಗಿದೆ. ನಕ್ಸಲ್ ಪೀಡಿತ ಪ್ರದೇಶದ ನಾವೂರು ಶಾಲೆಗೆ 5 ಲಕ್ಷ ರೂ. ಅನುದಾನ ಮಂಜೂರಾಗಿದೆ. ರಾಜ್ಯಸಭಾ ಸದಸ್ಯೆಯಾಗಿದ್ದ ಜಯಶ್ರೀ ಅವರ ಅನುದಾನದಲ್ಲಿ ಗುತ್ಯಡ್ಕದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀವಿದ್ಯಾ, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿದ್ದರೆ ಅಂತಹವುಗಳನ್ನು ಮಾರ್ಚ್‌ನೊಳಗೆ ಪೂರ್ಣಗೊಳಿಸುವಂತೆ ಗಮನಹರಿಸಬೇಕು. ಪಟ್ಟಣ ಪಂ. ವ್ಯಾಪ್ತಿಯೊಳಗಿನ ಶಾಲೆಗಳ ಕಾಮಗಾರಿಗಳು ಬಾಕಿ ಇದ್ದಲ್ಲಿ ಪ.ಪಂ.ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕೋಟಿ ವೃಕ್ಷ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು ಶಾಲೆ, ಕಾಲೇಜುಗಳ ಆವರಣದಲ್ಲಿ, ರಸ್ತೆಗಳ ಬದಿ ಗಿಡ ನೆಡುವ ಕಾರ್ಯ ಶೀಘ್ರವಾಗಿ ಆಗಬೇಕು. ಕೊಟ್ಟಿರುವ ಗುರಿಗಿಂತ ಹೆಚ್ಚಾದಲ್ಲಿ ಉತ್ತಮ ಎಂದರು. ಕೃಷಿ ಇಲಾಖೆ, ಆರೋಗ್ಯ ಇಲಾಖೆಯ ವಿವರಗಳನ್ನು ಪಡೆದುಕೊಂಡರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲದ ಕಾರಣ ಒಬ್ಬರಿಂದ ಮಾತ್ರ ಅಹವಾಲನ್ನು ಸ್ವೀಕರಿಸಲು ಸಾಧ್ಯವಾಯಿತು. ಲಾಯಿಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅನಧಿಕೃತವಾಗಿ ಗೂಡಂಗಡಿ ನಿರ್ಮಿಸಿದ್ದರಿಂದ ತೊಂದರೆಯಾಗುತ್ತಿರುವ ಬಗ್ಗೆ ಜಯಪ್ರಕಾಶ್ ಎಂಬುವರು ಮನವಿ ಮಾಡಿದರು. ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ, ತಾಪಂ ಉಪಾಧ್ಯಕ್ಷೆ ವೇದಾವತಿ, ಜಿಪಂ ಸದಸ್ಯೆ ಸೌಮ್ಯಲತಾ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.