ಅತ್ಯಾಚಾರ, ವಂಚನೆ ಪ್ರಕರಣದ ಆರೋಪಿ ಖುಲಾಸೆ

Update: 2016-07-28 15:18 GMT

ಮಂಗಳೂರು, ಜು. 28: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿ ವಂಚಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ 6ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಸುರತ್ಕಲ್ ಮದ್ಯಗ್ರಾಮದ ಕೋಡಿಪಾಡಿ ಎಂಬಲ್ಲಿನ ನಿವಾಸಿ ರಾಜು (32) ಖುಲಾಸೆಗೊಂಡಿರುವ ಆರೋಪಿ.

2013ರ ಜೂನ್ 1ರಂದು ರಾಜು ತನ್ನ ಸಂಬಂಧಿ ಸುರತ್ಕಲ್ ಸಮೀಪದ ಯುವತಿಯನ್ನು ಅತ್ಯಾಚಾರ ನಡೆಸಿದ್ದನೆಂದು ಆರೋಪಿಸಲಾಗಿತ್ತು. ಇದಾದ ಬಳಿಕ ಪದೇ ಪದೇ ಆಕೆಯ ಮನೆಗೆ ಬಂದು ಆಕೆಯನ್ನು ಮದುವೆಯಾಗಿ ನಂಬಿಸಿ 2014ರ ಮೇ 10ರವರೆಗೆ ಆಕೆಯೊಂದಿಗೆ ದೈಹಿಕ ಸಂಕರ್ಪ ಬೆಳೆಸಿ ಆಕೆ ಗರ್ಭವತಿಯಾದಾಗ ಮದುವೆಯಾಗಲು ನಿರಾಕರಿಸಿದ್ದ. ವಂಚನೆಗೊಳಗಾದ ಯುವತಿಯು 2014ರ ನವೆಂಬರ್ 4ರಂದು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ನಡೆಸಿದ ಸುರತ್ಕಲ್ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯವು ಯುವತಿಯು ಜನ್ಮ ನೀಡಿದ್ದ ಹೆಣ್ಣು ಮಗು ಹಾಗೂ ರಾಜುವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಿತ್ತು. ಅದರಂತೆ ಡಿಎನ್‌ಎ ಪರೀಕ್ಷೆಯಿಂದ ಹೊರ ಬಿದ್ದಿರುವ ಅಂಶವು ಶಿಶು ಹಾಗೂ ರಾಜುಗೆ ವ್ಯತಿರಿಕ್ತವಾಗಿತ್ತು. ಈ ಸಂಬಂಧ ವಾದ, ಪ್ರತಿವಾದವನ್ನು ಆಲಿಸಿದ 6ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ.ಪುಟ್ಟಲಿಂಗಸ್ವಾಮಿ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಯ ಪರವಾಗಿ ವೈ.ವಿಕ್ರಂ ಹೆಗ್ಡೆ, ಕೆ.ಪೀತಾಂಬರ, ಅಬ್ದುಲ್ ನಝೀರ್ ಮೂಡುಶೆಡ್ಡೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News