ಗಂಡನನ್ನು ತಡೆಯಲು ವಿಮಾನ ನಿಲ್ದಾಣಕ್ಕೇ ಬಾಂಬ್ ಬೆದರಿಕೆ ಹಾಕಿದಳು!

Update: 2016-07-28 15:44 GMT

ಜಿನೇವ, ಜು. 28: ತನ್ನ ಗಂಡ ತನ್ನನ್ನು ಬಿಟ್ಟು ವಿದೇಶಕ್ಕೆ ಹೋಗುವುದನ್ನು ಈ ಮಹಿಳೆ ಸಹಿಸಲಿಲ್ಲ. ಗಂಡನನ್ನು ಹೇಗಾದರೂ ತಡೆಯಬೇಕೆಂದು ಯೋಚಿಸಿದ ಮಹಿಳೆಗೆ ಹೊಳೆದದ್ದು ಖತರ್ನಾಕ್ ಉಪಾಯ.
ಫೋನ್ ಕೈಗೆತ್ತಿಕೊಂಡ ಆಕೆ ಸ್ವಿಝರ್‌ಲ್ಯಾಂಡ್‌ನ ಜಿನೇವ ವಿಮಾನ ನಿಲ್ದಾಣಕ್ಕೆ ಫೋನ್ ಮಾಡಿ, ವಿಮಾನ ನಿಲ್ದಾಣದ ಫ್ರೆಂಚ್ ವಿಭಾಗದಲ್ಲಿರುವ ವ್ಯಕ್ತಿಯೋರ್ವನ ಬಳಿ ಬಾಂಬ್ ಇದೆ ಎಂದು ಬಾಂಬ್ ಹಾಕಿಯೇ ಬಿಟ್ಟಳು.
ತಕ್ಷಣ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಏರ್ಪಟ್ಟಿತು. ವಿಮಾನ ನಿಲ್ದಾಣದ ಮುಖ್ಯ ದ್ವಾರವನ್ನು ಹೊರತುಪಡಿಸಿ ಎಲ್ಲ ದ್ವಾರಗಳನ್ನು ಮುಚ್ಚಲಾಯಿತು. ನಿಲ್ದಾಣ ತಲುಪುವ ಎಲ್ಲ ಮಾರ್ಗಗಳಲ್ಲಿ ತಪಾಸಣೆ ಏರ್ಪಡಿಸಲಾಯಿತು. ಅಲ್ಲಿಗೆ ಬರುವ ಎಲ್ಲರ ದಾಖಲೆಗಳನ್ನು ಪರೀಕ್ಷಿಸಲಾಯಿತು. ಈ ರಸ್ತೆಗಳಲ್ಲಿ ವಾಹನಗಳ ದೊಡ್ಡ ಸಾಲೇ ನಿರ್ಮಾಣವಾಯಿತು.
ವಿಮಾನಗಳ ಹಾರಾಟ ಗಂಟೆಗಟ್ಟಳೆ ವಿಳಂಬವಾಯಿತು.
ಈ ನಡುವೆ, ಫೋನ್ ಕರೆಯ ಜಾಡನ್ನು ಪತ್ತೆಹಚ್ಚಿದ ಸ್ವಿಝರ್‌ಲ್ಯಾಂಡ್ ಪೊಲೀಸರು, ಅದು ಜಿನೇವದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಫ್ರಾನ್ಸ್‌ನ ಆ್ಯನೆಸಿ ಎಂಬ ಪಟ್ಟಣದಿಂದ ಬಂದಿರುವುದನ್ನು ಪತ್ತೆಹಚ್ಚಿದರು. ಅಲ್ಲಿನ ವಿಳಾಸಕ್ಕೆ ಫ್ರಾನ್ಸ್ ಪೊಲೀಸರು ದಾಳಿ ನಡೆಸಿ ಅಲ್ಲಿದ್ದ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡರು.
ತನ್ನ ಗಂಡನನ್ನು ತಡೆಯಲು ಹಾಗೆ ಮಾಡಿದೆ ಎನ್ನುವುದನ್ನು ಬಳಿಕ ಮಹಿಳೆ ಒಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News