ಆತ್ರಾಡಿ: ಬೋನಿನಲ್ಲಿ ಹೆಣ್ಣು ಚಿರತೆ ಸೆರೆ

Update: 2016-07-28 16:08 GMT

ಉಡುಪಿ, ಜು.28: ಆತ್ರಾಡಿ ಪರಿಸರದಲ್ಲಿ ಕಳೆದ ಒಂದು ವಾರದಿಂದ ತಿರುಗಾಡುತ್ತಿದ್ದ ಚಿರತೆಯೊಂದನ್ನು ಇಂದು ಬೋನಿನ ಮೂಲಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆತ್ರಾಡಿಯ ಮದಗ ಚೆನ್ನಬೆಟ್ಟು ಎಂಬಲ್ಲಿ ಸುಧಾಕರ ನಾಯಕ್ ಎಂಬವರ ಮನೆ ಸಮೀಪ ಜು.27ರಂದು ಸಂಜೆ ವೇಳೆ ಅರಣ್ಯ ಇಲಾಖೆ ಯವರು ಇರಿಸಿದ್ದ ಬೋನಿಯಲ್ಲಿ 3-4ವರ್ಷ ಪ್ರಾಯದ ಹೆಣ್ಣು ಚಿರತೆ ರಾತ್ರಿ ವೇಳೆ ಸೆರೆಯಾಗಿದೆ.

ಆತ್ರಾಡಿ ಪರಿಸರದಲ್ಲಿ ಎರಡು ಚಿರತೆಗಳು ಸುಳಿದಾಡುತ್ತಿರುವ ಕುರಿತು ಒಂದು ವಾರದ ಹಿಂದೆ ಅರಣ್ಯ ಇಲಾಖೆಯವರಿಗೆ ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ಇಲಾಖೆಯ ಹಿರಿಯಡ್ಕ ಶಾಖೆಯವರು ನಿನ್ನೆ ಸಂಜೆ ವೇಳೆ ನಾಯಿ ಸಮೇತ ಬೋನನ್ನು ಇರಿಸಿದ್ದರು. ರಾತ್ರಿ ಬೇಟೆಗಾಗಿ ಬಂದ ಚಿರತೆ ನಾಯಿಯನ್ನು ಕಂಡು ಬೋನಿನೊಳಗೆ ನುಗ್ಗಿತ್ತು. ಕೂಡಲೇ ಬೋನಿನ ಬಾಗಿಲು ಮುಚ್ಚಿ ಅದರೊಳಗೆ ಚಿರತೆ ಬಂಧಿಯಾಯಿತು.

ಈ ಮಾಹಿತಿ ತಿಳಿದ ಸ್ಥಳೀಯರು ಬೆಳಗಿನ ಜಾವ 5:30ರ ಸುಮಾರಿಗೆ ಇಲಾಖೆಯವರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಹಿರಿಯಡಕ ಉಪವಲಯ ಅರಣ್ಯಾಧಿಕಾರಿ ಜಿ.ನರೇಶ್ ನೇತೃತ್ವದ ತಂಡ ಬೋನಿನಲ್ಲಿ ಸೆರೆಯಾದ ಚಿರತೆಯನ್ನು ರಕ್ಷಿಸಿ ಸಂಜೆ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟಿತ್ತು.

ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಮನೋಹರ್ ಕೆ., ಸ್ಥಳೀಯರಾದ ಕೇಶವ ನಾಯಕ್ ಸಹಕರಿಸಿದ್ದರು. ಹಿರಿಯಡ್ಕ ಪರಿಸರದಲ್ಲಿ ಚಿರತೆ ನಾಡಿಗೆ ಬರುವ ಸಂಖ್ಯೆ ವೃದ್ಧಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಕೆಲ ದಿನಗಳ ಹಿಂದೆಯಷ್ಟೆ ಅಲ್ಲೇ ಸಮೀಪದ ಪೆರ್ಣಂಕಿಲ ಪರಿಸರದಲ್ಲಿ ಸುಮಾರು 5ವರ್ಷ ಪ್ರಾಯದ ಹೆಣ್ಣು ಚಿರತೆ ಯನ್ನು ಅರಣ್ಯ ಇಲಾಖೆಯವರು ಬೋನಿನ ಮೂಲಕ ಸೆರೆ ಹಿಡಿದಿದ್ದರು.

ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆ ಸಿದ್ದು, ಆತ್ರಾಡಿ, ಪಾಪೂಜೆ ರಸ್ತೆ, ಹಿರಿಯಡ್ಕ ಜೂನಿಯರ್ ಕಾಲೇಜು ಸಮೀಪ ಬೋನುಗಳನ್ನು ಇರಿಸಲಾಗಿದೆ. ಇದೀಗ ಮತ್ತೆ ಎರಡು ಕಡೆ ಬೋನು ಇರಿಸಲು ಬ್ರಹ್ಮಾವರ ಹಾಗೂ ಉಡುಪಿ ವಲಯದಿಂದ ಹೆಚ್ಚುವರಿ ಬೋನುಗಳನ್ನು ತರಿಸಲಾಗುತ್ತಿದೆ.

ಪೆರ್ಣಂಕಿಲದಲ್ಲಿ ಇನ್ನೊಂದು ಚಿರತೆ ಇರುವ ಕುರಿತ ದೂರು ಬಂದಿದ್ದು, ಆ ಹಿನ್ನೆಲೆಯಲ್ಲಿ ಪೆರ್ಣಂಕಿಲ ಮರಾಠಿ ಸಮಾಜ ಮಂದಿರದ ಬಳಿ ಇಂದು ಅಥವಾ ನಾಳೆ ಬೋನು ಇರಿಸಲಾಗುವುದು. ಅದೇ ರೀತಿ ಆತ್ರಾಡಿ ಪರಿಸರ ದಲ್ಲೂ ಮತ್ತೊಂದು ಚಿರತೆ ಇರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದು, ಇಲ್ಲಿಯೂ ಬೋನನ್ನು ಇಡಲಾಗುವುದು ಎಂದು ಹಿರಿಯಡಕ ಉಪವಲಯ ಅರಣ್ಯಾಧಿಕಾರಿ ಜಿ.ನರೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News