ಜಮಾತೆ ಇಸ್ಲಾಮಿ ಹಿಂದ್‌ನಿಂದ ಆ.21ರಿಂದ ಶಾಂತಿ, ಮಾನವೀಯತೆ ಅಭಿಯಾನ
ಬಂಟ್ವಾಳ, ಜು. 28: ಸಮಾಜದಲ್ಲಿ ಮಾನವೀಯ ವೌಲ್ಯ ಕುಸಿಯುತ್ತಿರುವ ಈ ಕಾಲದಲ್ಲಿ ದೇಶಾದ್ಯಂತ ಸಾಮರಸ್ಯ ಕಾಪಾಡುವ ಅಗತ್ಯ ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನಿಂದ ರಾಷ್ಟ್ರಾದ್ಯಂತ ’ಶಾಂತಿ ಮತ್ತು ಮಾನವೀಯತೆ ಅಭಿಯಾನ’ ಕೈಗೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಂ ಹಿಂದ್‌ನ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ತಾರುಲ್ಲಾ ಶರೀಫ್ ಹೇಳಿದರು.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದತೆಯ ಸಂದೇಶ ನೀಡುವ ನಿಟ್ಟಿನಲ್ಲಿ ಪ್ರೌಢ ಶಾಲೆಯಿಂದ ವಿಶ್ವವಿದ್ಯಾಲಯವರೆಗಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವನ್ನು ಕೇಂದ್ರಿಕರಿಸಿಕೊಂಡು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಆಗಸ್ಟ್ 21ರಿಂದ ಸೆಪ್ಟಂಬರ್ 4ರವರೆಗೆ 15 ದಿನಗಳ ಕಾಲ ರಾಷ್ಟ್ರಾದ್ಯಂತ ಶಾಂತಿ ಮತ್ತು ಮಾನವೀಯತೆ ಅಭಿಯಾನ ನಡೆಯಲಿದ್ದು ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 21ರಂದು ಏಕ ಕಾಲದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಅಭಿಯಾನದ ಸ್ವಾಗತ ಸಮಿತಿಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ನಿವೃತ್ತ ಪೊಲೀಸ್ ಅಧಿಕಾರಿ ಉಣ್ಣಿಕೃಷ್ಣನ್ ಸೇರಿದ್ದಾರೆ. ಸಮಿತಿಗೆ ಸೇರುವ ನಿಟ್ಟಿನಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಣಿಲ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮತ್ತು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರ ವ್ಯಾಪಿ ಸಂಘಟನೆಯಾಗಿದ್ದು ಕಳೆದ ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ರಾಜ್ಯದ 12 ಜಿಲ್ಲೆಗಳ 480 ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿದ್ದ ಸಂಘಟನೆ ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆಗೆ ಸಲ್ಲಿಸಿತ್ತು. ಅಲ್ಲದೆ ಬರ ಪೀಡಿತ 480 ಗ್ರಾಮಗಳಿಗೆ 100 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗಿದ್ದು ಬೋರ್‌ವೆಲ್‌ಗಳನ್ನು ಕೂಡಾ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಗಳನ್ನು ಅಭಿಯಾನದಲ್ಲಿ ಪ್ರಸ್ತಾಪಿಸುವ ಮೂಲಕ ಅಭಿಯಾನದಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಬಿಲಾಲ್ ಮಾತನಾಡಿ, ಇದೇ ಮೊದಲ ಬಾರಿಗೆ ಬಂಟ್ವಾಳ ತಾಲೂಕಿಗೆ ಆಗಮಿಸಿದ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ತಾರುಲ್ಲಾ ಶರೀಪ್ ಐದು ದಿವಸಗಳ ಕಾಲ ತಾಲೂಕಿನಲ್ಲಿ ಸಂಘಟನಾ ಪ್ರವಾಸ ಕೈಗೊಳ್ಳಲಿದ್ದಾರೆ. ತಾಲೂಕಿನ ವಿವಿಧ ಧರ್ಮಗಳ ಗಣ್ಯರನ್ನು ಹಾಗೂ ರಾಜಕೀಯ ನೇತಾರನ್ನು ಭೇಟಿ ಮಾಡಿ ಸೌಹಾರ್ದ ಕೂಟ ಏರ್ಪಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಲಯ ಸಂಚಾಲಕ ಅಬ್ದುಲ್ ಸಲಾಂ ಯು., ಜಿಲ್ಲಾ ಸಂಚಾಲಕ ಇಲ್ಯಾಸ್ ಇಸ್ಮಾಯೀಲ್, ಬಂಟ್ವಾಳ ತಾಲೂಕು ಅಧ್ಯಕ್ಷ ಅಮಾನುಲ್ಲಾ ಖಾನ್ ಸಹಿತ ಸಂಘಟನೆ ಮೊದಲಾದ ಮುಖಂಡರು ಉಪಸ್ಥಿತರಿದ್ದರು.