×
Ad

ಜಿಎಸ್‌ಟಿ ಮಸೂದೆ ಮೆತ್ತಗಾದ ಸರಕಾರ

Update: 2016-07-28 22:57 IST

ಹೊಸದಿಲ್ಲಿ, ಜು.28: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯ ಕುರಿತು ರಾಜ್ಯಗಳೊಂದಿಗೆ ನಿರ್ಣಾಯಕ ಸಭೆಯೊಂದನ್ನು ನಡೆಸಿದ ಒಂದು ದಿನದ ಬಳಿಕ, ಕಾಂಗ್ರೆಸ್‌ನ 3 ಬೇಡಿಕೆಗಳಲ್ಲಿ ಒಂದನ್ನು ಪೂರೈಸಿರುವ ನರೇಂದ್ರ ಮೋದಿ ಸರಕಾರ, ಸಂವಿಧಾನ ತಿದ್ದುಪಡಿ ಮಸೂದೆಗೆ ಹಾಲಿ ಸಂಸತ್ ಅಧಿವೇಶನದಲ್ಲೇ ಮಂಜೂರಾತಿ ಪಡೆಯುವ ಭರವಸೆಯಲ್ಲಿದೆ.

ಶೇ.1ರಷ್ಟು ಹೆಚ್ಚುವರಿ ತೆರಿಗೆ ಯೋಜನೆಯನ್ನು ಕೈಬಿಡಬೇಕೆಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಒಪ್ಪಿರುವ ಸರಕಾರ, ಪ್ರಸ್ತಾವಿತ ಮಸೂದೆಯಲ್ಲಿ ತೆರಿಗೆ ದರಕ್ಕೆ ಮಿತಿ ನಿಗದಿಪಡಿಸದೆ ಹಾಗೂ ವಿವಾದ ತೀರ್ಮಾನವನ್ನು ಜಿಎಸ್‌ಟಿ ಸಮಿತಿಗೆ ಬಿಡುವ ಮೂಲಕ ಉಳಿದೆರಡು ವಿಷಯಗಳ ಬಗ್ಗೆ ದೃಢ ನಿಲುವು ತಳೆದಿದೆ.
ಹಾಲಿ ಅಧಿವೇಶನದಲ್ಲೇ ಮಸೂದೆಗೆ ಒಪ್ಪಿಗೆ ಪಡೆಯಲು ಸರಕಾರ ಪ್ರಯತ್ನಿಸಲಿದೆಯೆಂಬ ಪ್ರಬಲ ಸಂದೇಶ ನೀಡಲು ಈ ನಿರ್ಧಾರವನ್ನು ಸರಕಾರ ತಳೆದಿದೆಯೆಂದು ಅಭಿಪ್ರಾಯಿಸಲಾಗಿದೆ.
ಜಿಎಸ್‌ಟಿ ತಿದ್ದುಪಡಿಯ ಕುರಿತು ಸರಕಾರವು ಗುರುವಾರ ಕಾಂಗ್ರೆಸ್‌ನೊಂದಿಗೆ ಔಪಚಾರಿಕ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಇದೇ ವೇಳೆ, ಅನೌಪಚಾರಿಕ ಮಾತುಕತೆ ಸರಿಯಾದ ದಾರಿಯಲ್ಲಿ ಸಾಗುತ್ತಿರುವ ಬಗ್ಗೆ ಸೂಚನೆಗಳು ಲಭಿಸಿವೆ.
ಪ್ರಮುಖ ವಿಪಕ್ಷದೊಡನೆ ಮಸೂದೆಯ ಕುರಿತಾದ ಭಿನ್ನಾಭಿಪ್ರಾಯ ನಿವಾರಣೆಯಾದೊಡನೆ ಜಟಿಲವಾದ ನೇರ ಸುಧಾರಣೆ ವಿಧೇಯಕದ ಕುರಿತು ವ್ಯಾಪಕ ಚರ್ಚೆಗಾಗಿ ಸರಕಾರವು ಸರ್ವ ಪಕ್ಷ ಸಭೆಯೊಂದನ್ನು ಕರೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News