ಕೋಟೆಪುರ: ಟಿಪ್ಪು ಸುಲ್ತಾನ್ ಶಾಲೆಯಲ್ಲಿ ವನಮಹೋತ್ಸವ, ತಾರಸಿ ಕೃಷಿ ಮಾಹಿತಿ

Update: 2016-07-28 17:51 GMT

ಉಳ್ಳಾಲ, ಜು.28: ಉಳ್ಳಾಲ ದರ್ಗಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ನಿಸರ್ಗದೆಡೆ ನಮ್ಮ ನಡೆ’ ಕಾರ್ಯಕ್ರಮದ ಪ್ರಯುಕ್ತ ಗುರುವಾರ ಕೋಟೆಪುರ ಟಿಪ್ಪು ಸುಲ್ತಾನ್ ಪ್ರೌಢಶಾಲೆಯಲ್ಲಿ ವನಮಹೋತ್ಸವ ಹಾಗೂ ತಾರಸಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರೌಢಶಾಲಾ ಜೀವನದಲ್ಲಿ ಗಿಡಗಳ ಜಿಗುರು ಚಿವುಟುವ ಉತ್ಸಾಹ ಇರುವುದು ಸಾಮಾನ್ಯ, ಆದರೆ ಅಂತಹ ಉತ್ಸಾಹ ಗಿಡ ನೆಟ್ಟು ಸಂರಕ್ಷಿಸುವತ್ತ ತೋರಿದರೆ ಪರಿಸರ ಸಂಪೂರ್ಣ ಹಸಿರುಮಯಗೊಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚಾಕ್ಲೆಟ್‌ನಲ್ಲಿ ಸೀಸದ ಅಂಶವಿದ್ದು ರೋಗಕ್ಕೆ ಮೂಲ ಕಾರಣವಾಗುತ್ತಿರುವುದರಿಂದ ಮಕ್ಕಳು ಚಾಕ್ಲೆಟ್‌ನಿಂದ ದೂರವಿರಿ. ಅದರ ಬದಲು ಬಾಳೆಹಣ್ಣನ್ನು ಬಿಸಿಲಲ್ಲಿಟ್ಟು ಒಣಗಿಸಿ ತಿನ್ನುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹುದು. ವಿವಿಧ ಕೃಷಿ ಮೇಳದ ಹೆಸರಲ್ಲಿ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಖಾದ್ಯ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗುತ್ತಿದ್ದು ಹೆಚ್ಚಿನ ಮಾಹಿತಿ ಜನಸಮಾನ್ಯರಿಗೆ ಸಿಗುತ್ತಿಲ್ಲ ಎಂದು ಬೀಜಸಿರಿ ಸಂಸ್ಥೆಯ ಮುಖ್ಯಸ್ಥ ಬಿಲ್ಲಂಪದವು ನಾರಾಯಣ ಭಟ್ ಖೇದ ವ್ಯಕ್ತಪಡಿಸಿದರು.

ಶಾಲಾ ಮಟ್ಟದಲ್ಲಿ ಕೃಷಿ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಯಾವುದೇ ಶಾಲೆಗೆ ಕರೆದರೂ ಹೋಗಿ ಉಚಿತ ಮಾಹಿತಿ, ಅಗತ್ಯಬಿದ್ದರೆ ಸಸಿ ಹಾಗೂ ಬೀಜ ನೀಡಲಾಗುವುದು. ಮುಂದಿನ ಪೀಳಿಗೆಗೂ ಕೃಷಿ ಬಗ್ಗೆ ಮಾಹಿತಿ ಇರಬೇಕು ಎನ್ನುವುದು ರೈತಸಂಘದ ಆಶಯ. ಆದರೆ ಕೃಷಿಗೆ ಪ್ರೋತ್ಸಾಹ ನೀಡಬೇಕಾದ ಸರಕಾರಿ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟು ಕೃಷಿಕರ ಪಾಲಿಗೆ ಮಾರಕವಾಗುತ್ತಿದೆ ಎಂದು ರೈತಸಂಘ ಕಾರ್ಯದರ್ಶಿ ಮನೋಹರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಪೌರಾಯುಕ್ತೆ ರೂಪಾ ಟಿ.ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಮೋನು ಇಸ್ಮಾಯೀಲ್, ದರ್ಗಾ ಸಮಿತಿ ಸದಸ್ಯ ಆಸಿಫ್ ಅಬ್ದುಲ್ಲಾ, ಶಾಲಾ ಸಂಚಾಲಕ ಎ.ಕೆ.ಮೊಯಿದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕೋಟೆಪುರ ಜುಮಾ ಮಸೀದಿ ಉಪಾಧ್ಯಕ್ಷ ಅನ್ವರ್ ಹುಸೈನ್, ಸದಸ್ಯ ಹಾಜಿ ಹಮ್ಮಬ್ಬ, ಆಡಳಿತಾಧಿಕಾರಿ ಅಬ್ದುಲ್ ಲತೀಫ್, ದರ್ಗಾ ಲೆಕ್ಕಾಧಿಕಾರಿ ಶಿಹಾಬ್ ತಂಙಳ್, ಟಿಪ್ಪು ಸುಲ್ತಾನ್ ಕಾಲೇಜು ಪ್ರಾಂಶುಪಾಲ ಬಿ.ವಿ.ಮೊಯಿದ್ದೀನ್, ಅಲೇಕಳ ಸಯ್ಯದ್ ಮದನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ರಮ್ಲತ್, ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಎಂಕೆ ಮಂಜನಾಡಿ, ಹಾಜಿ ಅಹ್ಮದ್ ಅಬ್ಬಾಸ್, ಹಮೀದ್ ಮೂಸಾ, ಬನಾತ್ ಕಾಲೇಜಿನ ಪ್ರಾಂಶುಪಾಲೆ ಝಾಯಿದಾ ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.

ಟಿಪ್ಪು ಸುಲ್ತಾನ್ ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News