ಆ.2ಕ್ಕೆ ಜಿಲ್ಲಾ ಮಟ್ಟದ ಹಜ್ ತರಬೇತಿ ಶಿಬಿರ
ಉಳ್ಳಾಲ, ಜು.28: ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಮಂಜನಾಡಿ ವಲಯ ಇದರ ವತಿಯಿಂದ 2016-17ನೆ ಸಾಲಿನ ಜಿಲ್ಲಾ ಮಟ್ಟದ ಹಜ್ ತರಬೇತಿ ಶಿಬಿರವು ತೊಕ್ಕೊಟ್ಟುವಿನ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಅ.2ರಂದು ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಂಜನಾಡಿ ವಲಯದ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಜ್ ಯಾತ್ರಿಕರಿಗೆ ಒಂದು ದಿವಸ ನಡೆಯಲಿರುವ ಶಿಬಿರದಲ್ಲಿ ಶೈಖುನಾ ಪಿ.ಎಂ.ಮುಸ್ಲಿಯಾರ್ ತರಬೇತಿಯನ್ನು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ರಾಜ್ಯ ವಕ್ಫ್ ಸಮಿತಿ ಸದಸ್ಯ ವೈ. ಮುಹಮ್ಮದ್ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಮಿತಿಯ ಸದಸ್ಯ ಎಸ್.ಎಂ.ರಶೀದ್ ಹಾಜಿ, ಮಂಗಳೂರು ಝೀನತ್ ಭಕ್ಷ್ ಯತೀಂಖಾನದ ಅಧ್ಯಕ್ಷ ಇಬ್ರಾಹೀಂ ಬಾವಾ ಹಾಜಿ, ಎಚ್.ಎಚ್.ಕಂಪೆನಿ ಪಾಲುದಾರ ಕುಂಞಿ ಅಹ್ಮ್ಮದ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮಮ್ತಾಜ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಲಿಕುಂಞಿ ಪಾರೆ, ಟಿ.ಎಸ್.ಇಸ್ಮಾಯೀಲ್, ಕತ್ತರ್‌ಬಾವ ಹಾಜಿ, ಮುಹಮ್ಮದ್ ಮಾಸ್ಟರ್, ಎಂ.ಇ.ಮೊಯ್ದಿನ್ ಕುಂಞಿ, ಜಲೀಲ್ ಮೋಂಟುಗೋಳಿ ಉಪಸ್ಥಿತರಿದ್ದರು.