ಮುಷ್ಕರಗಳನ್ನು ಮೊಳಕೆಯಲ್ಲಿಯೇ ಚಿವುಟುವ ಪ್ರಯತ್ನವಾಗಲಿ
ಜುಲೈ 25ರಿಂದ ತಮ್ಮ ವೇತನ ಪರಿಷ್ಕರಣೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ಮುಷ್ಕರ, ಜುಲೈ 29ರಂದು ದೇಶಾದ್ಯಂತ ಬ್ಯಾಂಕುಗಳ ವಿಲೀನ ವಿರೋಧಿಸಿ ಬ್ಯಾಂಕ್ ಸಿಬ್ಬಂದಿಯ ಮುಷ್ಕರ, ಸೆಪ್ಟಂಬರ್ ಎರಡರಂದು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಲವು ಕಾರ್ಮಿಕ ಸಂಘಟನೆಗಳಿಂದ ಒಂದು ದಿನದ ಸಾಂಕೇತಿಕ ಮುಷ್ಕರ ಮತ್ತು ಜುಲೈನಲ್ಲಿ ನಡೆಸಬೇಕಿದ್ದ ರೈಲು ಮತ್ತು ಕೇಂದ್ರ ಸರಕಾರದ ಸಿಬ್ಬಂದಿಯ ಮುಷ್ಕರವನ್ನು ಸದ್ಯ ಮುಂದೂಡಿದ್ದು, ಅವು ಯಾವಾಗಲೂ ನಡೆಯಬಹುದಾಗಿದೆ. ಹೀಗೆ ಹಬ್ಬಗಳ ಸರಮಾಲೆ ಬರುತ್ತಿದ್ದಂತೆ ಮುಷ್ಕರಗಳ ಪರ್ವವೂ ಆರಂಭವಾಗಿದ್ದು, ಸರಕಾರದ ನಿದ್ದೆ ಕೆಡಿಸಿದೆ. ಹಾಗೆಯೇ ಜನಸಾಮಾನ್ಯರೂ ಚಿಂತೆೆಗೀಡಾಗಿದ್ದಾರೆ.
ದುಡಿಯುವ ವರ್ಗ ಮುಷ್ಕರ ಹೂಡಿ ಬೀದಿಗಿಳಿದಾಗ ಸಾಮಾನ್ಯ ವಾಗಿ ಜನರು ಅವರ ವಿರುದ್ಧ ಆಕ್ರೋಶ ವ್ಯಕ್ತಮಾಡುತ್ತಾರೆ. ಮಾಧ್ಯಮಗಳು ಜನಸಾಮಾನ್ಯರಿಗಾಗುವ ಅನನುಕೂಲ ಮತ್ತು ಮುಷ್ಕರದ ನಂತರದ ಪರಿಣಾಮಗಳನ್ನು ವಿಸ್ತೃತವಾಗಿ ಬಿಂಬಿಸಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ಸರಕಾರ ಮತ್ತು ಸಂಬಂಧಿತ ಆಡಳಿತವರ್ಗ ಮುಷ್ಕರಗಳು ಕಾನೂನು ಬಾಹಿರ ಮತ್ತು ಅವರ ಬೇಡಿಕೆಗಳು ನ್ಯಾಯಯುತವಲ್ಲದ್ದು ಎಂದು ಕೆಲವು ಅಂಕೆ-ಸಂಖ್ಯೆಗಳಿಂದ ಮಾಧ್ಯಮಗಳ ಮೊರೆಹೋಗುತ್ತವೆ. ನ್ಯಾಯ ದೊರಕುವವರೆಗೆ ತಮ್ಮ ಹೋರಾಟವೆಂದು ಕಾರ್ಮಿಕವರ್ಗ ಘಂಟಾಘೋಷವಾಗಿ ಕೂಗುತ್ತದೆ. ಇವು ಮುಷ್ಕರದ ದಿನಗಳಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯಾವಳಿಗಳು.
ಕಾರ್ಮಿಕ ವರ್ಗ ಮುಷ್ಕರ ಹೂಡಿದಾಗ ಇದನ್ನು ಬಹುತೇಕ ವೇತನ ಹೆಚ್ಚಳಕ್ಕಾಗಿ ಎಂದು ತಿಳಿಯಲಾಗುತ್ತದೆ. ಆದರೆ, ಅವರ ಮುಷ್ಕರ ಮುಖ್ಯವಾಗಿ ವೇತನ ಹೆಚ್ಚಳಕ್ಕಾಗಿ ಇದ್ದರೂ, ಅದರ ಸಂಗಡ ಅವರ ಕರ್ತವ್ಯ ಸಂಬಂಧಿ ಹಲವಾರು ಕಾರಣಗಳಿರುತ್ತವೆ. ದುರ್ದೈವದಿಂದ ಅವರ ಕಾರ್ಯ ಸಂಬಂಧಿ ವರ್ಗಾವರ್ಗಿ, ಪದೋನ್ನತಿ, ಕಾರ್ಯ ಸ್ಥಳದಲ್ಲಿ ಕಿರುಕುಳ, ದಬ್ಬಾಳಿಕೆ, ಒತ್ತಾಸೆ, ಕಾರ್ಯದ ಸ್ಥಿತಿಗತಿ ಮುಂತಾದ ಕಾರಣಗಳು ಬಿಂಬಿತವಾಗದೆ, ಕೇವಲ ಅರ್ಥಿಕ ಸೌಲಭ್ಯಗಳು ಮಹತ್ವ ಪಡೆಯುತ್ತಿದ್ದು, ಜನಸಾಮಾನ್ಯರ ಸಹಾನುಭೂತಿ ಮತ್ತು ಅನುಕಂಪವನ್ನು ಕಳೆದುಕೊಳ್ಳುತ್ತಾರೆ. ಸಾರಿಗೆ ನೌಕರರ ಬೇಡಿಕೆಯಲ್ಲಿ ವೇತನ ಹೆಚ್ಚಳದ ಸಂಗಡ ಸುಮಾರು 41 ಇತರ ಬೇಡಿಕೆಗಳೂ ಇದ್ದವು.
ಯಾವುದೇ ಸಂಸ್ಥೆಯಲ್ಲಿ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ನಿಂತ ನೀರಾಗಿರದೆ, ಜಗತ್ತು ಬದಲಾದಂತೆ ಬದಲಾಗುತ್ತಿರಬೇಕು ಮತ್ತು ಈ ಬದಲಾವಣೆ ಕೇವಲ ಕಾಟಾಚಾರಕ್ಕೆ ಇರದೆ, ಹೊರಗಿನ ಬದಲಾವಣೆಗೆ ಸ್ಪಂದಿಸುತ್ತಿರಬೇಕು ಮತ್ತು ಅರ್ಥ ಪೂರ್ಣವಾಗಿರಬೇಕು ಮತ್ತು ಮುಖ್ಯವಾಗಿ ಇದು ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಸ್ಪಂದಿಸುತ್ತಿರಬೇಕು. ಕಾರ್ಮಿಕ- ಮಾಲಕ ಸಂಬಂಧದ ಈ ಸಮೀಕರಣವನ್ನು ವಾಸ್ತವಿಕತೆಯ ಆಧಾರದಲ್ಲಿ ಬಿಡಿಸಿದಾಗಲೇ ಸಮಸ್ಯೆಗಳು ಪರಿಹಾರವಾಗುವುದು.
ಸಿಬ್ಬಂದಿಯ ವೇತನ ಮತ್ತು ಇತರ ಸೌಲಭ್ಯಗಳು ನಿರ್ದಿಷ್ಟ ಅವಧಿಯಲ್ಲಿ ಆಗಬೇಕು ಮತ್ತು ಅವು ಕನಿಷ್ಠ ಆವಶ್ಯಕತೆಗಳನ್ನು ನೀಗಿಸಬೇಕು ಎನ್ನುವ ಕಾನೂನು ಮತ್ತು ನಿಯಮಾವಳಿಗಳು ದೇಶದಲ್ಲಿ ಇವೆ. ಆದರೆ, ಇವು ಆಗುತ್ತಿವೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸರಕಾರ ಮಾತ್ರ ಇದು ತನ್ನ ಕರ್ತವ್ಯ ಎಂದು ಪರಿಗಣಿಸುವುದಿಲ್ಲ. ದುಡಿಯುವ ವರ್ಗದ ಬೇಡಿಕೆಗಳು ಎಷ್ಟೇ ನ್ಯಾಯಯುತವಾಗಿರಲಿ, ಅವುಗಳಿಗಾಗಿ ಬೀದಿಗಿಳಿದು, ಜನಸಾಮಾನ್ಯರ ಬದುಕನ್ನು ಅಯೋಮಯ ಮಾಡಿ, ಸಾರ್ವಜನಿಕ ಅಸ್ತಿ ಪಾಸ್ತಿಗೆ ಹಾನಿ ಮಾಡಿದಾಗಲೇ, ಸರಕಾರ ಎಚ್ಚೆತ್ತುಕೊಳ್ಳುವುದು. ದುಡಿಯುವ ವರ್ಗ ಎಂದೂ ದಿಢೀರ್ ಮುಷ್ಕರ ಹೂಡುವುದಿಲ್ಲ. ಈ ನಿಟ್ಟಿನಲ್ಲಿ ಇರುವ ನಿಯಮಾವಳಿಗಳನ್ನು ಪಾಲಿಸಿ, ಸಮಸ್ಯೆ ನಿವಾರಣೆಗೆ ಸಾಕಷ್ಟು ಸಮಯ ನೀಡಿ, ಆ ಮೇಲೆ ಬೀದಿಗಿಳಿಯುತ್ತಾರೆ. ಆದರೂ ಸರಕಾರಗಳು ಕೊನೆಘಳಿಗೆಯ ವರೆಗೆ ಕ್ರಮ ತೆಗೆದು ಕೊಳ್ಳದಿರುವುದು ಈ ದೇಶದಲ್ಲಿ ತೀರಾ ಮಾಮೂಲು. ಹಾಗೆಯೇ ಮುಷ್ಕರ ಮತ್ತು ಮುಷ್ಕರ ಹೂಡುವವರನ್ನು ಖಳನಾಯಕರನ್ನಾಗಿ ನೋಡುವ ಮತ್ತು ಬಿಂಬಿಸುವ ಕಾರ್ಯ ಸದಾ ನಡೆಯುತ್ತದೆ. ಮುಷ್ಕರ ಹೂಡುವವರ ಮೇಲೆ ವ್ಯತಿರಿಕ್ತ ಸಾರ್ವಜನಿಕ ಅಭಿಪ್ರಾಯ ಮೂಡುವಂತೆ ಮಾಧ್ಯಮದಲ್ಲಿ ಪ್ರಚಾರ ಮಾಡಲಾಗುತ್ತದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಶಾಸಕರು ತಮ್ಮ ಸಂಬಳವನ್ನು ಸುಮಾರು ಶೇ. 75ರಷ್ಟು ಹೆಚ್ಚಿಸಿ ಕೊಂಡರು. ಸಂಸದರೂ ಗಮನಾರ್ಹ ವೇತನ ಏರಿಕೆಯನ್ನು ಪಡೆದರು. ಇವರೆಲ್ಲರೂ ಬದಲಾದ ಅರ್ಥಿಕ ಸ್ಥಿತಿಗತಿ ಮತ್ತು ಹಣದುಬ್ಬರದ ಹೆಸರಿನಲ್ಲಿ ಪಡೆದರು. ಇದೇ ಮಾನದಂಡ ದುಡಿಯುವ ವರ್ಗಕ್ಕೂ ಏಕೆ ಅನ್ವಯವಾಗಬಾರದು ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ. ಹಣದುಬ್ಬರ ನಾಗಾಲೋಟದಲ್ಲಿರುವಾಗ ಸರಕಾರ ಸಾರಿಗೆ ನೌಕರರಿಗೆ ಕೊಡಮಾಡಿರುವ ಒಂದಿಷ್ಟು ಏರಿಕೆ ತೃಪ್ತಿಕರವಾಗಿದೆಯೇ ಎನ್ನುವುದನ್ನು ಸರಕಾರ ವಿವರಿಸಬೇಕಾಗಿದೆ. ಅದಕ್ಕೂ ಮಿಗಿಲಾಗಿ ಕಳೆದ 45 ವರ್ಷಗಳಿಂದ ಅವರ ಸಂಬಳ ಸೌಲಭ್ಯ ಪರಿಷ್ಕರಣೆ ಆಗಿಲ್ಲ ಎನ್ನುವ ವಾಸ್ತವವನ್ನೂ ಪರಿಗಣಿಸಬೇಕು. ಒಂದು ಸಂಸ್ಥೆ ನಷ್ಟ ಅನುಭವಿಸಿದರೆ, ಅದಕ್ಕೆ ಕೇವಲ ಸಿಬ್ಬಂದಿಯನ್ನು ದೂರುವುದು ಸರಿಯಲ್ಲ. ಅದಕ್ಕೆ ಹಲವಾರು ಗೋಚರ ಮತ್ತು ಅಗೋಚರ ಕಾರಣಗಳು ಇರುತ್ತವೆ. ಎಲ್ಲಾ ಕೋನಗಳಲ್ಲಿ ಇವುಗಳನ್ನು ವಿಶ್ಲೆೇಷಿಸಬೇಕಾ ಗುತ್ತದೆ. ಹಾಗೆಯೇ ಆ ಸಂಸ್ಥೆಯನ್ನು ರೈಲು ಹತ್ತಿಸಲು ಸಿಬ್ಬಂದಿಯ ಸಂಬಳ-ಸೌಲಭ್ಯವನ್ನು ಏರಿಸದಿರುವುದು ಮತ್ತು ಸಂಬಳ ಕಡಿತ ಮಾಡುವುದು ಪರಿಹಾರವಲ್ಲ. ಇತ್ತೀಚೆಗೆ ಒಂದು ಸಾಫ್ಟ್‌ವೇರ್ ಕಂಪೆನಿಯ ಲಾಭದಲ್ಲಿ ಕಡಿಮೆಯಾದಾಗ, ಸಿಬ್ಬಂದಿಯ ವೇರಿಯೆಬಲ್ ಸಂಬಳದಲ್ಲಿ ಕಡಿತಮಾಡಲಾಯಿತು. ಆದರೆ, ಉನ್ನತಾಧಿಕಾರಿಗಳ ದೊಡ್ಡ ಅಂಕೆಗಳ ಸಂಬಳವನ್ನು ಮುಟ್ಟಲಿಲ್ಲ. ಅನಿಷ್ಟಗಳಿಗೆ ಶನೀಶ್ವರ ಕಾರಣ ಎನ್ನುವಂತೆ ಕೆಳವರ್ಗದ ಸಿಬ್ಬಂದಿಯ ಹೊಣೆಗಾರನನ್ನಾಗಿ ಮಾಡಲಾಗುತ್ತದೆ.
ಕಾರ್ಮಿಕರ ಸಮಸ್ಯೆಗಳನ್ನು ಮತ್ತು ಅವರ ಬೇಡಿಕೆಗಳನ್ನು ಪರಿಶೀಲಿಸು ವಾಗ ಕಾನೂನು, ಹೋಲಿಕೆ, ಲಾಭ-ನಷ್ಟಗಳಂತೆ ಮಾನವೀಯತೆಯ ಅಂಶವನ್ನೂ ಪರಿಗಣಿಸಬೇಕು. ಕಾರ್ಮಿಕ ತೃಪ್ತಿ ಪಟ್ಟಾಗ ಆತನ ಉತ್ಪನ್ನ ಕೂಡಾ ಹೆಚ್ಚಾಗುತ್ತದೆ. ಕಾರ್ಮಿಕ-ಮಾಲಕ ಬಾಂಧವ್ಯದಲ್ಲಿ ಸಾಮರಸ್ಯ ಇದ್ದಾಗ ಕಂಪೆನಿ ಚೆನ್ನಾಗಿ ನಡೆಯುತ್ತದೆ. ಸರಕಾರ ಮತ್ತು ಆಡಳಿತ ವರ್ಗ ಸಮಸ್ಯೆಯನ್ನು ಮೊಳಕೆಯಲ್ಲಿಯೇ ಚಿವುಟಿ ಅದು ಹೆಮ್ಮರವಾಗದಂತೆ ಲಕ್ಷವಹಿಸಬೇಕು. ಸಮಸ್ಯೆಯನ್ನು ಬಿಗಡಾಯಿಸಲು ಬಿಡುವುದರಿಂದ ಅನುಭವಿಸುವ ನಷ್ಟ ಮತ್ತು ಬೇಡಿಕೆಗಳಿಗೆ ಬೇಗ ಸ್ಪಂದಿಸುವುದರಿಂದ ಅಗುವ ಲಾಭವನ್ನು ಗಣನೆಗೆ ತೆಗದುಕೊಂಡು ಕಾರ್ಯ ಪ್ರವೃತ್ತರಾಗಬೇಕು.