×
Ad

ಕೋಟೆಕಾರು: ಡಿವೈಡರ್ ಹಾರಿ ಬೈಕ್‌ಗೆ ಢಿಕ್ಕಿ ಹೊಡೆದ ಕಾರು; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Update: 2016-07-29 09:10 IST

ಮಂಗಳೂರು, ಜು. 29: ಮಂಗಳೂರಿನಿಂದ ಕೇರಳದ ಕಡೆಗೆ ತೆರಳುತ್ತಿದ್ದ ಕಾರೊಂದು ನಿಯಂತ್ರಣ ಕಳೆದು ಡಿವೈಡರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಚಾಲಕನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಕೋಟೆಕಾರು ಅಡ್ಕದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೋಟೆಕಾರು ಕೊಂಡಾಣದ ಹರಿಬಡಾವಣೆಯ ನಿವಾಸಿ ನವೀನ್ ಉದಯ್ (51) ಎಂದು ಗುರುತಿಸಲಾಗಿದೆ.

ನವೀನ್ ಅವರು ತನ್ನ ಮನೆಯಿಂದ ಬಜಾಜ್ ಡಿಸ್ಕವರ್ ಬೈಕಿನಲ್ಲಿ ಎಂದಿನಂತೆ ಈಜು ತರಬೇತಿಗೆಂದು ಮಂಗಳೂರಿನ ಕಡೆಗೆ ಬರುತ್ತಿದ್ದರು. ಮಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಇನ್ನೋವ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಅಡ್ಕದ ಬಳಿ ರಾಷ್ಟ್ರೀಯ ಹೆದ್ದಾರಿಯ 66ರ ಚತುಷ್ಪಥ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಕಾರು ಅತೀ ವೇಗದಲ್ಲಿದ್ದುದರಿಂದ ಡಿವೈಡರ್‌ನ ಮೇಲೇರಿ ವಿರುದ್ಧ ದಿಕ್ಕಿನ ಹೆದ್ದಾರಿ ರಸ್ತೆಯ ಮಧ್ಯ ಭಾಗದಲ್ಲಿ ಹಠಾತಾಗಿ ಅಡ್ಡವಾಗಿ ನಿಂತಿದ್ದು, ಈ ಸಂದರ್ಭದಲ್ಲಿ ಅದೇ ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರಿಗೆ ಢಿಕ್ಕಿ ಹೊಡೆದಿದೆ. ಇದರ ಬೆನ್ನಲ್ಲೇ ಬೈಕ್‌ನ ಹಿಂದಿನಿಂದ ಬರುತ್ತಿದ್ದ 42 ನಂಬರಿನ ಖಾಸಗಿ ಬಸ್ಸು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಕಾರು ಮತ್ತು ಬಸ್ಸಿನ ಬಲವಾದ ಹೊಡೆತಕ್ಕೆ ಸಿಲುಕಿದ ನವೀನ್ ಅವರ ತಲೆ,ಎದೆ ಇತರ ಅಂಗಾಂಗಳು ಛಿಧ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೋವ ಕಾರು ಚಾಲಕ ಕಾಸರಗೋಡು ನಿವಾಸಿ ಆಸಿಫ್(25) ಮತ್ತು ಉಳಿದ ಮೂರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್ ಭದ್ರಾವತಿ ಮೂಲದವರಾಗಿದ್ದು, ಮೂರು ವರ್ಷಗಳ ಹಿಂದಷ್ಟೆ ಕುಟುಂಬ ಸಮೇತ ಬಂದು ಕೋಟೆಕಾರ್ ಅಡ್ಕದ ಹರಿಬಡಾವಣೆಯಲ್ಲಿ ಸ್ವಂತ ಮನೆ ಖರೀದಿಸಿ ವಾಸ್ತವ್ಯ ಹೂಡಿದ್ದರು. ನವೀನ್ ಅವರು ಈ ಹಿಂದೆ ವಿದೇಶದಲ್ಲಿದ್ದು, ಪ್ರಸ್ತುತ ಜಪ್ಪಿನ ಮೊಗರಿನ ಖಾಸಗಿ ಶಾಲೆಯೊಂದರಲ್ಲಿ ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News