ಅಮೆರಿಕದಲ್ಲಿ ಉದ್ಯೋಗ ಸೃಷ್ಠಿಗೆ ಮೊದಲ ಆದ್ಯತೆ: ಹಿಲರಿ ಕ್ಲಿಂಟನ್
ಫಿಲಡೆಲ್ಪಿಯಾ, ಜು.29: ಜನರ ಅಧ್ಯಕ್ಷೆಯಾಗಿ ಅಮೆರಿಕವನ್ನು ಕಟ್ಟಿ ಬೆಳೆಸುವೆನು ಉದ್ಯೋಗ ಸೃಷ್ಠಿಗೆ ಮೊದಲ ಆದ್ಯತೆ ನೀಡುವುದಾಗಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿರುವ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.
ಫಿಲಡೆಲ್ಪಿಯಾದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಅಮೆರಿಕವನ್ನು ಒಡೆಯಲು ನಾನೆಂದಿಗೂ ಅವಕಾಶ ನೀಡುವುದಿಲ್ಲ. ಅಮೆರಿಕವನ್ನು ಒಡೆಯಲು ಕೆಲವು ಶಕ್ತಿಗಳು ಷಡ್ಯಂತ ನಡೆಸುತ್ತಿದೆ ಎಂದು ಆರೋಪಿಸಿದ ಹಿಲರಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಮೆರಿಕದಲ್ಲಿ ಯಾವುದೇ ಧರ್ಮದವರಿಗೂ ನಿಷೇಧ ಹೇರಿಲ್ಲ. ಏಕೆಂದರೆ ಅಮೆರಿಕ ಸರ್ವಧರ್ಮವನ್ನು ಗೌರವಿಸುವ ದೇಶ. ಇದುವರೆಗೂ ಇಲ್ಲದ ನಿಷೇಧ ಇನ್ನು ಮುಂದೆಯೂ ಇರದು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಇಲ್ಲಿ ಇದ್ದಾರೆ. ಎಲ್ಲ ಧರ್ಮದವರಿಗೂ ಸಹಬಾಳ್ವೆಗೆ ಇಲ್ಲಿ ಅವಕಾಶ ಇದೆ ಎಂದು ಹಿಲರಿ ನುಡಿದರು.
ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಇದು ನನ್ನ ಬಾಳಿನ ಅಪೂರ್ವ ಕ್ಷಣವಾಗಿದೆ ಎಂದು ಹಿಲರಿ ಹೇಳಿದರು ಹಿಲರಿ ಕ್ಲಿಂಟನ್ ಬುಧವಾರ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಪಕ್ಷವೊಂದರಿಂದ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರು.
ಅಮೆರಿಕದ 240 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳಾ ಅಭ್ಯರ್ಥಿ ಪ್ರಮುಖ ಪಕ್ಷದಿಂದ ಅಧ್ಯಕ್ಷಿಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಶ್ವೇತಭವನದಲ್ಲಿ ಆಡಳಿತ ನಡೆಸುವುದಕ್ಕಾಗಿ ನವೆಂಬರ್ ಎಂಟರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಹಣಾಹಣಿ ನಡೆಯಲಿದೆ.
ಹಿಲರಿ ಹೊಂದಿರುವಷ್ಟು ಅರ್ಹತೆ ನನಗಿಲ್ಲ: ಒಬಾಮಾ
ಒಂದು ಕಾಲದ ರಾಜಕೀಯ ತಮ್ಮ ಶತ್ರು ಹಾಗೂ ಪ್ರಸ್ತುತ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ಪರ ಮೆಚ್ಚುಗೆ ವ್ಯಕ್ತಪಡಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೇರಿದಂತೆ ನಾನು ಕೂಡ ಅಮೆರಿಕ ಅಧ್ಯಕ್ಷ ಪದವಿಗೆ ಹಿಲರಿ ಹೊಂದಿರುವಷ್ಟು ಅರ್ಹತೆ ಹೊಂದಿಲ್ಲ ಎಂದು ಹೇಳಿದ್ದಾರೆ.
ಇಡೀ ಪ್ರಪಂಚ ಅಮೆರಿಕದಲ್ಲಿ ನಡೆಯುತ್ತಿರುವ ಬೆಳವಣೆಗೆಯ ಕಡೆಗೆ ನೋಡುತ್ತಿದೆ .ಅಮೆರಿಕದ ಅಧ್ಯಕ್ಷೀಯ ಪದವಿ ಕೇವಲ ಅಮೆರಿಕದ ಪ್ರಜೆಗಳಿಗೆ ಮಾತ್ರವಲ್ಲದೇ ಇಡೀ ಪ್ರಪಂಚದ ಪ್ರಜೆಗಳ ದೃಷ್ಟಿಯಲ್ಲಿ ಪ್ರಮುಖವಾಗಿದೆ.ಎಂದು ಹೇಳಿದ ಒಬಾಮ ಇದೇ ವೇಳೆ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
"ವೈಯುಕ್ತಿಕ ಲಾಭಕ್ಕಾಗಿ 70 ವರ್ಷ ಕಳೆದ, ತಮ್ಮದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಬಗ್ಗೆ ಕಾಳಜಿ ಇಲ್ಲ ಮತ್ತು ಸದಾಕಾಲ ಬೇರೊಬ್ಬರನ್ನು ಟೀಕಿಸುವ ವ್ಯಕ್ತಿ ಡೋನಾಲ್ಡ್ ಟ್ರಂಪ್ ಇಂದು ದೇಶದ ಜನರ ಧ್ವನಿಯಾಗಲು ಹೊರಟಿದ್ದಾರೆ. ಎಂದು ಒಬಾಮ ಟೀಕಿಸಿದರು.