ಕಾಸರಗೋಡು: ಉದುಮ ಕ್ಷೇತ್ರ ಮತ್ತೆ ಕಾಂಗ್ರೆಸ್ ಮಡಿಲಿಗೆ
ಕಾಸರಗೋಡು, ಜು. 29: ಉದುಮ ಜಿ.ಪಂ. ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶಾನ್‌ವಾಝ್ ಗೆಲುವಿನ ನಗೆ ಬೀರುವ ಮೂಲಕ ಉದುಮ ಜಿ.ಪಂ. ಕ್ಷೇತ್ರ ಮತ್ತೆ ಕಾಂಗ್ರೆಸ್ ಮಡಿಲಿಗೆ ಸೇರಿದಂತಾಗಿದೆ.
ಉದುಮ ಜಿ.ಪಂ. ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾನ್‌ವಾಝ್ 1,886 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಎಡರಂಗದ ಐಎನ್‌ಎಲ್ ಅಭ್ಯರ್ಥಿ ಮುಹಮ್ಮದ್ ಕುಂಞಿ ಕಲ್ನಾಡ್‌ರ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಉದುಮ ಕ್ಷೇತ್ರದಿಂದ 2015ರಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಪಾದೂರು ಕುಂಞಾಂಬು ಅವರು ಇತ್ತೀಚೆಗೆ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಉದುಪ ಜಿ.ಪಂ. ಕ್ಷೇತ್ರದ ಸದಸ್ಯ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಶಾನ್‌ವಾಝ್, ಎಡರಂಗದಿಂದ ಐಎನ್‌ಎಲ್ ಅಭ್ಯರ್ಥಿ ಮುಹಮ್ಮದ್ ಕುಂಞಿ ಕಲ್ನಾಡ್ ಮತ್ತು ಬಿಜೆಪಿಯಿಂದ ಬಾಬು ರಾಜ್ ಕಣಕ್ಕಿಳಿದಿದ್ದರು.
ಜು.28ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಶಾನ್‌ವಾಝ್ 14,986 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಡರಂಗದ ಐಎನ್‌ಎಲ್ ಅಭ್ಯರ್ಥಿ ಮುಹಮ್ಮದ್ ಕುಂಞಿ ಕಲ್ನಾಡ್ 13,100 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಬಾಬುರಾಜ್ 4,107 ಮತಗಳನ್ನು ಪಡೆದಿದ್ದಾರೆ.
ಉದುಮ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಮುನ್ನ ಕಾಸರಗೋಡು ಜಿಲ್ಲಾ ಪಂಚಾಯತ್ ನಲ್ಲಿ ಐಕ್ಯರಂಗ 8, ಎಡರಂಗ 7 , ಬಿಜೆಪಿ 2 ಸ್ಥಾನಗಳನ್ನು ಪಡೆದಿತ್ತು. ಅಧಿಕಾರಕ್ಕಾಗಿ ಐಕ್ಯರಂಗ ಮತ್ತು ಎಡರಂಗದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಉದುಮ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಐಕ್ಯರಂಗ 8 ಸ್ಥಾನಗಳನ್ನು ಪಡೆದು ಅಧಿಕಾರವನ್ನು ಪಡೆದಿದೆ.