"ನೀವು ಯಾವುದನ್ನೂ, ಯಾರನ್ನೂ ದೇಶಕ್ಕಾಗಿ ಕಳೆದುಕೊಂಡಿಲ್ಲ"
ಫಿಲಡೆಲ್ಫಿಯಾ, ಜು.29: ‘ನೀವು ಯಾವುದನ್ನೂ, ಯಾರನ್ನೂ ದೇಶಕ್ಕಾಗಿ ಕಳೆದುಕೊಂಡಿಲ್ಲ’ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿಲರಿ ಕ್ಲಿಂಟನ್ ಅವರ ಬೆಂಬಲಾರ್ಥ ನಡೆದ ಸಮಾವೇಶವೊಂದರಲ್ಲಿ ಇರಾಕ್ ಯುದ್ಧದಲ್ಲಿ ಹುತಾತ್ಮನಾದ ಅಮೆರಿಕನ್ ಮುಸ್ಲಿಂ ಯೋಧನೊಬ್ಬನ ತಂದೆ ಭಾವಪರವಶರಾಗಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಹೇಳಿದ ಮಾತಿದು.
ಖಿಝ್ರ ಖಾನ್ ಎಂಬವರ ಪುತ್ರ ಆರ್ಮಿ ಕ್ಯಾಪ್ಟನ್ ಹುಮಾಯುನ್ ಖಾನ್ 12 ವರ್ಷಗಳ ಹಿಂದೆ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿಯೊಂದರಲ್ಲಿ ಮೃತಪಟ್ಟಿದ್ದರು. ಖಾನ್ ಕುಟುಂಬ ಹಲವಾರು ವರ್ಷಗಳ ಹಿಂದೆ ಸಂಯುಕ್ತ ಅರಬ್ ಸಂಸ್ಥಾನದಿಂದ ಅಮೆರಿಕಕ್ಕೆ ವಲಸೆ ಬಂದಿತ್ತು.
‘ಯಾವುದೇ ತ್ಯಾಗ ಮಾಡದ ಟ್ರಂಪ್ ನಮ್ಮ ಕುಟುಂಬದಂತಹ ಇತರ ಧಾರ್ಮಿಕ ಅಲ್ಪಸಂಖ್ಯಾತರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಟ್ರಂಪ್ ಅವರು ಹೇಳಿದ ಹಾಗೆ ಮುಸ್ಲಿಮರ ಪ್ರವೇಶವನ್ನು ಅಮೆರಿಕ ಬಹಳ ಹಿಂದೆಯೇ ನಿಷೇಧಿಸಿದ್ದಿದ್ದರೆ ನಮ್ಮ ಮಗ ಈ ದೇಶದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವ ಅವಕಾಶವೇ ಇರಲಿಲ್ಲ ’ ಎಂದು ಅವರು ಹೇಳಿದರು.
‘‘ನೀವು ಅರ್ಲಿಂಗ್ಟನ್ ಸ್ಮಶಾನಕ್ಕೆ ಭೇಟಿ ನೀಡಿದ್ದೀರೇನು? ಅಲ್ಲಿ ದೇಶಕ್ಕಾಗಿ ಹೋರಾಡುತ್ತಾ ಮಡಿದ ಧೀರ ಸೈನಿಕರ ಸಮಾಧಿಗಳನ್ನೊಮ್ಮೆ ನೋಡಿ- ಅಲ್ಲಿ ಎಲ್ಲಾ ಜಾತಿ, ಧರ್ಮಗಳ ಮಂದಿಯ ಸಮಾಧಿಯೂ ಇದೆ’ ಎಂದರು.
‘ಡೊನಾಲ್ಡ್ ಟ್ರಂಪ್ ಇತರ ಅಲ್ಪಸಂಖ್ಯಾತ ಮಹಿಳೆಯರ, ನ್ಯಾಯಾಧೀಶರ ಹಾಗೂ ತಮ್ಮದೇ ಪಕ್ಷದ ನಾಯಕತ್ವಕ್ಕೆ ಅಗೌರವ ತೋರಿಸುತ್ತಿದ್ದಾರೆ. ಅವರು ಗೋಡೆಗಳನ್ನು ಕಟ್ಟಿ ನಮ್ಮನ್ನು ದೇಶದಿಂದ ಹೊರ ಹಾಕಲು ಬಯಸಿದ್ದಾರೆ’ಎಂದರು ಖಾನ್.
ಭಾಷಣದ ನಡುವೆ ತಮ್ಮ ಸೂಟ್‌ನಿಂದ ದೇಶದ ಸಂವಿಧಾನದ ಪಾಕೆಟ್ ಸೈಜ್ ಪ್ರತಿಯೊಂದನ್ನು ಹೊರಗೆಳೆದ ಅವರು, ಅದನ್ನು ಎತ್ತಿ ತೋರಿಸುತ್ತಾ ‘ಡೊನಾಲ್ಡ್ ಟ್ರಂಪ್, ಅಮೆರಿಕನ್ನರು ಅವರ ಭವಿಷ್ಯಕ್ಕಾಗಿ ನಿಮ್ಮ ಮೇಲೆ ವಿಶ್ವಾಸವಿಡಬೇಕೆಂದು ನೀವು ಹೇಳುತ್ತಿದ್ದೀರಿ. ನಿಮ್ಮನ್ನೊಂದು ಪ್ರಶ್ನೆ ಕೇಳಬಯಸುತ್ತೇನೆ. ಅಮೆರಿಕದ ಸಂವಿಧಾನವನ್ನು ನೀವು ಯಾವತ್ತಾದರೂ ಓದಿದ್ದೀರಾ ? ನನ್ನಲ್ಲಿರುವ ಪ್ರತಿಯನ್ನು ನಿಮಗೆ ನೀಡಲು ನಾನು ಸಿದ್ಧನಿದ್ದೇನೆ. ಅದರಲ್ಲಿ ಸ್ವಾತಂತ್ರ್ಯ (ಲಿಬರ್ಟಿ) ಹಾಗೂ ಕಾನೂನಿನಡಿಯಲ್ಲಿ ಸಮಾನ ಸುರಕ್ಷೆ ಎಂಬ ಪದಗಳನ್ನು ಹುಡುಕಿ’ ಎಂದು ಹೇಳಿದರು.