ವಿಕಾಸ್ ಪಿಯು ಕಾಲೇಜು ವತಿಯಿಂದ ‘ಪಾಂಚ್‌ ಸೋ ಕಾ ಜೋಶ್’ ಸ್ಪರ್ಧೆ

Update: 2016-07-29 11:25 GMT

ಮಂಗಳೂರು,ಜು.29: ನಗರದ ವಿಕಾಸ್ ಪಿಯು ಕಾಲೇಜು ವತಿಯಿಂದ 10ನೆ ತರಗತಿಯ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವ ಸುಲುವಾಗಿ ‘ಪಾಂಚ್ ಸೋ ಕಾ ಜೋಶ್’ ಸ್ಪರ್ಧೆ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಗಸ್ಟ್ 27 ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಮುಖ್ಯಸ್ಥ ಕೃಷ್ಣ ಜೆ. ಪಾಲೆಮಾರ್, ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದೆ ಎಂದರು.

ಅತ್ಯುತ್ತಮ ವ್ಯವಹಾರ ಮಾದರಿ- ವ್ಯವಹಾರ ಶಾಸ್ತ್ರದ ಬಗ್ಗೆ ಅರಿವು ಮೂಡಿಸುವುದು, ಅತ್ಯುತ್ತಮ ಶೋಧನಾ ಮಾದರಿ- ವಿಜ್ಞಾನದ ಕುರಿತು ಹೆಚ್ಚಿನ ಅರಿವು ಮೂಡಿಸುವುದು, ಸೌಂದರ್ಯ ಗುಣ ಗ್ರಾಹಕತೆಯುಳ್ಳ ಚುರುಕು ಮಾದರಿ- ಕಲಾ ವಿಭಾಗದ ಬಗ್ಗೆ ಆಸಕ್ತಿ ಮೂಡಿಸುವುದು. ಸ್ಪರ್ಧೆಗೆ ವಿವಿಧ ಶಾಲೆಗಳಿಂದ ಬರುವ (ತಂಡದಲ್ಲಿ ತಲಾ 3 ವಿದ್ಯಾರ್ಥಿಗಳಂತೆ) ತಂಡಗಳಿಗೆ ಮೂಲಧನ 500 ರೂ. ನೀಡಲಾಗುವುದು. ಪ್ರತಿ ಶಾಲೆಯಿಂದ ಗರಿಷ್ಠ ಐದು ತಂಡಗಳು ಭಾಗವಹಿಸಬಹುದಾಗಿದೆ. ಈ ಗುಂಪುಗಳ ಶೋಧನೆ, ಸೌಂದರ್ಯ, ಚುರುಕುತನ, ಸೃಷ್ಟಿ ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ನೀಡಿದ ಮೂಲಧನ 500 ರೂ. ಮಾತ್ರ ಉಪಯೋಗಿಸಬೇಕು. 10 ತರಗತಿಯ ನಂತರ ಯಾವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಾಡುವ ಪ್ರಶ್ನೆಗೆ ಈ ಸ್ಪರ್ಧೆ ಮತ್ತು ವೃತ್ತಿ ಮಾರ್ಗದರ್ಶನದ ಮೂಲಕ ಅರಿವು ಮೂಡಿಸುವುದಾಗಿದೆ ಎಂದು ಅವರು ಹೇಳಿದರು.

ಪ್ರತಿ ವಿಭಾಗದಲ್ಲಿ ಜಯಗಳಿಸುವ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನವನ್ನು ಕಾಲೇಜು ವತಿಯಿಂದ ನೀಡಲಾಗುವುದು. ವಿಕಾಸ್ ಕಾಲೇಜು ಈಗಾಗಲೇ 40 ಶಾಲೆಗಳನ್ನು ಸಂಪರ್ಕಿಸಿದೆ. 150 ತಂಡಗಳು ಬರುವ ನಿರೀಕ್ಷೆ ಇದೆ ಎಂದು ಸ್ಪರ್ಧಿಗಳಿಗೆ ಭಾಗವಹಿಸುವಿಕೆ ಪದವಿಪತ್ರದೊಂದಿಗೆ ಮುಂದೆ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯುಳ್ಳ ಕೆರಿಯರ್ ಪಾಥ್‌ಚಾರ್ಟ್ ನೀಡಲಾಗುವುದು. ಮೂಲಧನದಲ್ಲಿ ಉಳಿದ ಹಣವನ್ನು ಮತ್ತು ವಿಕಾಸ್ ಕಾಲೇಜಿನ ಕೊಡುಗೆಯನ್ನು ಸೇರಿಸಿ, ಮಂಗಳೂರಿನ ಅನಾಥಾಶ್ರಮಕ್ಕೆ ಸ್ಪರ್ಧಾಗಳ ಉಪಸ್ಥಿತಿಯಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ. ಅನಂತ್ ಪ್ರಭು ಜಿ. ಹೇಳಿದರು.

ಗೋಷ್ಠಿಯಲ್ಲಿ ಕಾಲೇಜಿನ ಸಲಹೆಗಾರ ಪ್ರೊ. ರಾಜಾರಾಮಂ, ಪ್ರಾಂಶುಪಾಲ ಪ್ರೊ. ವೆಂಕಟ ರಾಯುಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News