‘‘ನನಗೆ ಕೇಜ್ರಿವಾಲ್‌ರಿಂದ ಕೊಲೆ ಬೆದರಿಕೆ’’

Update: 2016-07-29 10:13 GMT

ಹೊಸದಿಲ್ಲಿ, ಜು.29: ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ವರ್ಷ ದಿಲ್ಲಿ ಸರಕಾರದ ಸಚಿವ ಸಂಪುಟದಿಂದ ಹೊರದಬ್ಬಲ್ಪಟ್ಟಿದ್ದ ಆಪ್ ಶಾಸಕ ಅಸಿಮ್ ಅಹ್ಮದ್ ಖಾನ್ ಇದೀಗ ಗಂಭೀರ ಆರೋಪವೊಂದನ್ನು ಮಾಡಿದ್ದು, ತಾವು ಹಾಗೂ ತಮ್ಮ ಕುಟುಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತವರ ಪಕ್ಷದ ಸದಸ್ಯರಿಂದ ಜೀವ ಬೆದರಿಕೆ ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ‘‘ನನ್ನನ್ನು ಕೊಲ್ಲಿಸಬಹುದು’’ ಎಂದು ವೀಡಿಯೊ ಸಂದೇಶವೊಂದರಲ್ಲಿ ಕೇಜ್ರಿವಾಲ್ ಹೇಳಿದ ಮರುದಿನವೇ ಮಟಿಯಾ ಮಹಲ್ ಶಾಸಕರಾಗಿರುವ ಅಹ್ಮದ್ ಅವರ ಈ ಹೇಳಿಕೆ ಬಂದಿದೆ. ‘‘ಕಳೆದ 9-10 ತಿಂಗಳುಗಳಿಂದ ನನಗೆ ಕೊಲೆ ಬೆದರಿಕೆಗಳು ಬರುತ್ತಿದ್ದು ನನ್ನ ಕುಟುಂಬವೂ ಅಪಾಯದಲ್ಲಿದೆ. ನಾನು ಪೊಲೀಸ್ ದೂರು ದಾಖಲಿಸಿದ್ದೇನೆ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೂ ಮೇ 2 ರಂದು ಪತ್ರ ಬರೆದಿದ್ದೇನೆ. ದಿಲ್ಲಿ ಲೆಫ್ಟಿನೆಂಟ್ ಗವರ್ನರ್‌ರಿಗೂ ದೂರು ಸಲ್ಲಿಸಿದ್ದೇನೆ’’ಎಂದು ಅಹಮದ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಖಾನ್ ಕೇಜ್ರಿವಾಲ್ ಸಂಪುಟದಲ್ಲಿ ಈ ಹಿಂದೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿದ್ದರು. ತಮ್ಮ ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿಸುವ ಸಲುವಾಗಿ ಆರು ಲಕ್ಷ ರೂ.ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ತನಗೂ ತನ್ನ ಕುಟುಂಬ ಸದಸ್ಯರಿಗೂ ರಕ್ಷಣೆ ಒದಗಿಸಬೇಕೆಂದು ಹೇಳಿದ ಅಹ್ಮದ್ ತಾನು ಸಚಿವರಿಗೆ ಬರೆದ ಪತ್ರದ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.

‘‘ನಾನು ಕೇಜ್ರಿವಾಲ್ ಅವರ ನಿಜ ಬಣ್ಣ ಬಯಲು ಮಾಡುತ್ತೇನೆ. ನನ್ನಲ್ಲಿ ಸರಕಾರದ ಬಗೆಗಿನ ಕೆಲವೊಂದು ಆಡಿಯೊ ಹಾಗೂ ವೀಡಿಯೊ ದಾಖಲೆಗಳಿವೆ. ಅವುಗಳನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇನೆ.’’ ಎಂದು ಹೇಳಿದರು.

ಖಾನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ವಕ್ತಾರ ದೀಪಕ್ ಬಾಜಪೇಯಿ, ‘‘ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಕ್ರಮ ಬೇಕೇ?’’ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News