×
Ad

ಪ್ರಥಮ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕಿಗೆ 121.54 ಕೋಟಿ ರೂ.ಲಾಭ

Update: 2016-07-29 17:49 IST

ಮಂಗಳೂರು, ಜು.29: ಕರ್ಣಾಟಕ ಬ್ಯಾಂಕು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ. 11.16 ರ ವೃದ್ಧಿಯೊಂದಿಗೆ 121.54 ಕೋಟಿ ರೂ. ಉತ್ತಮ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಮ ಭಟ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಉದ್ಯಮದ ಇತ್ತೀಚಿನ ಪ್ರವೃತ್ತಿಗಳಿಗನುಗುಣವಾಗಿ ಅನುತ್ಪಾದಕ ಆಸ್ತಿಗಳಲ್ಲಿ ಸೂಕ್ಷ್ಮ ಹೆಚ್ಚಳವಾಗಿದ್ದರೂ, ಅನುತ್ಪಾದಕ ಆಸ್ತಿಗಳ ಬೆಳವಣಿಗೆಯನ್ನು ನಾವು ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ. ಅನುತ್ಪಾದಕ ಸ್ವತ್ತುಗಳ ಪೂರಕವಾಗಿ ಆಗಬಹುದಾದ ಹಾನಿಯನ್ನು ತಡೆಗಟ್ಟುವಲ್ಲಿ ಬ್ಯಾಂಕು ಕೈಗೊಂಡ ಮುಂಜಾಗ್ರತಾ ಕ್ರಮಗಳು ನಮಗೆ ತೃಪ್ತಿಯನ್ನು ನೀಡಿವೆ. ಉತ್ತಮ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಹಿಂದಿನ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 109.34 ಕೋಟಿ ರೂ. ಗಳಷ್ಟಿತ್ತು. ಹಿಂದಿನ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಇದ್ದ ಬ್ಯಾಂಕಿನ ನಿರ್ವಹಣಾ ಲಾಭವು 239.02 ಕೋಟಿ ರೂ.ಗಳಿಂದ 261.92 ಕೋಟಿ ರೂ.ಗೆ ಏರಿಕೆಯಾಗಿ ಶೇ. 9.58 ದರದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ನಿವ್ವಳ ಬಡ್ಡಿಲಾಭವು ಶೇ. 10.07 ರಷ್ಟು ಹೆಚ್ಚಳಗೊಂಡು 364.69 ಕೋಟಿ ರೂ. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಲಾಭವು 331.32 ಕೋಟಿ ರೂ.ಗಳಾಗಿತ್ತು ಎಂದು ಹೇಳಿದರು.

ಬ್ಯಾಂಕಿನ ಒಟ್ಟು ವ್ಯವಹಾರವು ಜೂ.30ರ ವೇಳೆಗೆ 86,447 ಕೋಟಿ ರೂ.ಗಳನ್ನು ತಲುಪಿದ್ದು, ಶೇ. 10.66 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿ ಮೊತ್ತವು 46,767 ಕೋಟಿ ರೂ.ಗಳಿಂದ 51,501 ಕೋಟಿ ರೂ. ಗಳನ್ನು ತಲುಪಿ ಶೇ. 10.12 ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನ ಮುಂಗಡವು 31,352 ಕೋಟಿ ರೂ.ಗಳಿಂದ 34,946 ಕೋಟಿ ರೂ.ಗಳನ್ನು ತಲುಪಿ ಶೇ. 11.47 ರ ದರದಲ್ಲಿ ವೃದ್ಧಿಯನ್ನು ಸಾಧಿಸಿದೆ.

ಪ್ರಸಕ್ತ ಸಾಲಿನ ಮೊದಲ ತ್ರೈಮಾಸಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು 1,389 ಕೋಟಿ ರೂ.ಗಳಷ್ಟಿದ್ದು, ಇದು ಬ್ಯಾಂಕಿನ ಒಟ್ಟು ಮುಂಗಡದ ಶೇ. 3.92ರಷ್ಟಿದೆ. ನಿವ್ವಳ ಅನುತ್ಪಾದಕ ಆಸ್ತಿಯು 911 ಕೋಟಿ ರೂ.ಗಳಾಗಿದ್ದು ನಿವ್ವಳ ಮುಂಗಡದ ಶೇ. 2.61 ರಷ್ಟಿದೆ. 2016-17ರ ಮೊದಲ ತ್ರೈಮಾಸಾಂತ್ಯಕ್ಕೆ ಬ್ಯಾಂಕಿನ ಬಂಡವಾಳ ಪರ್ಯಾಪ್ತದ ಅನುಪಾತವು (ಕ್ಯಾಪಿಟಲ್ ಅಡಿಕ್ವಸಿ ರೇಷಿಯೊ) ಬೇಸೆಲ್ ಐಐಐ ರ ಮಾನದಂಡಕ್ಕನುಗುಣವಾಗಿ ಶೇ. 11.64 ರಷ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಪರ್ಯಾಪ್ತದ ಅನುಪಾತವು ಕನಿಷ್ಠ ಶೇ. 9 ರಷ್ಟಿರಬೇಕು.

2016ರ ಜೂನ್ ಅಂತ್ಯಕ್ಕೆ ಬ್ಯಾಂಕು 733 ಶಾಖೆಗಳನ್ನು, 1,297 ಎಟಿಎಂಗಳನ್ನು ಮತ್ತು 52 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಹೊಂದಿದ್ದು, ಮಾರ್ಚ್ 2017ರ ಅಂತ್ಯಕ್ಕೆ ಬ್ಯಾಂಕು ಇನ್ನೂ 32 ಹೊಸ ಶಾಖೆಗಳನ್ನು ಮತ್ತು 203 ಹೊಸ ಎಟಿಎಂಗಳನ್ನು ಹಾಗೂ 48 ಇ-ಲಾಬಿ, ಮಿನಿ ಇ-ಲಾಬಿಗಳನ್ನು ಪ್ರಾರಂಭಿಸುವುದರ ಮೂಲಕ ಒಟ್ಟು 2,265 ಸೇವಾ ಕೇಂದ್ರಗಳನ್ನು ಹೊಂದಲಿದೆ.

2016-17ರ ಹಣಕಾಸು ವರ್ಷದಲ್ಲಿ 56,500 ಕೋಟಿ ರೂ. ಠೇವಣಿ ಮತ್ತು 39,500 ಕೋಟಿ ರೂ. ಮುಂಗಡವನ್ನು ಒಳಗೊಂಡು ಒಟ್ಟು 96,000 ಕೋಟಿ ರೂ. ವ್ಯವಹಾರವನ್ನು ತಲುಪುವ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News