ಸಂಘಪರಿವಾರದಿಂದ ಸಂವಿಧಾನವನ್ನು ಬುಡಮೇಲು ಮಾಡುವ ಪ್ರಯತ್ನ: ಜಯನ್ ಮಲ್ಪೆ

Update: 2016-07-29 13:10 GMT

ಮಂಗಳೂರು,ಜು.29: ದಲಿತ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಂಘಪರಿವಾರ ಸಂವಿಧಾನವನ್ನು ಬುಡಮೇಲು ಮಾಡುವಂತಹ ಕೆಲಸ ಮಾಡುತ್ತಿದೆ. ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮತಿಯನ್ನು ಹೇರುವ ಪ್ರಯತ್ನವನ್ನು ಮಾಡುತ್ತಿದೆ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಪಾದಿಸಿದ್ದಾರೆ.

ಅವರು ಇಂದು ದ.ಕ ಜಿಲ್ಲಾ ದಲಿತ ಹಾಗೂ ಅಲ್ಪಸಂಖ್ಯಾತ ದೌರ್ಜನ್ಯ ವಿರೋಧಿ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ದೇಶವ್ಯಾಪಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಮೋದಿ ಆಡಳಿತ ಆರಂಭವಾದ ನಂತರ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ದೇಶವನ್ನು ಮಾಂಸ ತಿಂದವರು ಹಾಳು ಮಾಡುತ್ತಿಲ್ಲ. ತುಪ್ಪ ತಿಂದವರು ಹಾಳು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂದು ಘೋಷಣೆಗಳನ್ನು ಹಾಕುವ ಸಂಘಪರಿವಾರ ದಲಿತರ ಮೇಲೆ ದೌರ್ಜನ್ಯವೆಸಗುತ್ತಿದೆ. ದಲಿತರು ದೇಶವನ್ನು ಆಳುವ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು. ಉಡುಪಿ ಕೃಷ್ಣ ಮಠದ ಪೇಜಾವರ ಸ್ವಾಮೀಜಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ವೌನವಾಗಿದ್ದಾರೆ ಎಂದು ಆರೋಪಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ದೇಶದಲ್ಲಿ ದಲಿತರ, ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ದಿನನಿತ್ಯ 27 ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ಪ್ರತಿವಾರ 13 ದಲಿತರ ಹತ್ಯೆಯಾಗುತ್ತಿದೆ, ಪ್ರತಿವಾರ 5 ದಲಿತರ ಮನೆ ಧ್ವಂಸವಾಗುತ್ತಿದೆ, 3 ಮಹಿಳೆಯರು ಮಾನಭಂಗಕ್ಕೊಳಗಾಗುತ್ತಿದ್ದಾರೆ. ಮುಸ್ಲಿಮರ ಮೇಲೆಯೂ ನಿರಂತರ ದಾಳಿಯಾಗುತ್ತಿದೆ . ಈ ದಾಳಿಗಳು ದೇಶವನ್ನು ಹಿಂದುತ್ವ ರಾಷ್ಟ್ರ ಮಾಡುವ ಷಡ್ಯಂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರಘುವೀರ್ ಸೂಟರ್‌ಪೇಟೆ, ಚಂದ್ರಕುಮಾರ್, ಕೂಸಪ್ಪ .ಎಂ, ನವಾಝ್ ಉಳ್ಳಾಲ, ಶೇಖರ ಹೆಜಮಾಡಿ, ರಾಜಾರಾಂ ಡಿ., ಆನಂದ ಮಿತ್ತಬೈಲು, ಶೇಷಪ್ಪ ನೆಕ್ಕಿಲ್, ರಮೇಶ್ ಕೋಟ್ಯಾನ್, ನಿರ್ಮಲ್‌ಕುಮಾರ್, ಆನಂದ ಬೆಳ್ಳಾರೆ , ಜಲೀಲ್ ಕೃಷ್ಣಾಪುರ, ರಿಯಾಝ್ ಫರಂಗಿಪೇಟೆ, ಸೇಷಪ್ಪ ಬೆದ್ರಕಾಡು, ವಿಠಲ ಭಂಡಾರಿ, ದೇವದಾಸ್, ರಘು ಎಕ್ಕಾರ್, ಅಶೋಕ್ ಕೊಂಚಾಡಿ, ಪ್ರಕಾಶ್ ಕೋಡಿಕಲ್ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಗಿಂತ ಮೊದಲು ಪುರಭವನದಿಂದ ದ.ಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News