ಪಾರ್ಕಿಂಗ್ ಸ್ಥಳಗಳು- ದಾನಪತ್ರ ಪಡೆದ ಜಾಗದ ಅತಿಕ್ರಮಣ: 15 ದಿನಗಳೊಳಗೆ ಕ್ರಮಕ್ಕೆ ಮನಪಾ ನಿರ್ಧಾರ

Update: 2016-07-29 14:10 GMT

ಮಂಗಳೂರು, ಜು. 29: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಂದರ್ಭ ಪಾಲಿಕೆಗೆ ದಾನಪತ್ರ ನೀಡಿದ್ದರೂ ಬಳಿಕ ಆ ಜಾಗವನ್ನು ಅತಿಕ್ರಮಿಸಿಕೊಂಡಿರುವುದು ಹಾಗೂ ಕಟ್ಟಡ ನಿರ್ಮಾಣ ಸಂದರ್ಭ ಪಾರ್ಕಿಂಗ್‌ಗಾಗಿ ಮೀಸಲಾಗಿರುವ ಜಾಗವನ್ನು ಶಾಪ್‌ಗಳಾಗಿ ಪರಿವರ್ತಿಸಿರುವ ಕುರಿತಂತೆ ಮುಂದಿನ 15 ದಿನಗಳೊಳಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಈ ಬಗ್ಗೆ ಇಂದು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಟೋ, ಪಾಲಿಕೆ ಸದಸ್ಯರು ಕೇಳಿರುವ ಲಿಖಿತ ದೂರಿನ ಬಗ್ಗೆ ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಕಾರ್ಪೊರೇಟರ್ ಎ.ಸಿ.ವಿನಯ್‌ರಾಜ್ ವಿಷಯ ಪ್ರಸ್ತಾಪಿಸಿ, ಮಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಮಿತಿಮೀರಿದೆ. ನಗರದ ಶೇ.95ರಷ್ಟು ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಉದ್ದಿಮೆ ಪರವಾನಿಗೆ ನೀಡುವಾಗ ಕಟ್ಟಡಕ್ಕೆ ಪಾರ್ಕಿಂಗ್ ಸ್ಥಳವಿರುವ ಬಗ್ಗೆ ಪರಿಶೀಲನೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆಯೇ ಎಂದು ಕೇಳಿರುವ ಚುಕ್ಕಿ ಪ್ರಶ್ನೆಗೆ ತನಗೆ ಸಮರ್ಪಕ ಉತ್ತರ ದೊರಕಿಲ್ಲ ಎಂದರು.

ಈ ಸಂದರ್ಭ ದನಿಗೂಡಿಸಿದ ವಿಪಕ್ಷ ಸದಸ್ಯ ಮಧುಕಿರಣ್, ನಗರದಲ್ಲಿ ಕಟ್ಟಡಗಳ ಪಾರ್ಕಿಂಗ್ ಜಾಗವನ್ನು ಅಂಗಡಿಗಳಾಗಿ ಪರಿವರ್ತಿಸಿ ಪರವಾನಿಗೆ ಪಡೆದುಕೊಂಡಿರುವ ಪ್ರಕರಣಗಳೂ ಸಾಕಷ್ಟಿವೆ ಎಂದು ದೂರಿದರು.

ವಿಪಕ್ಷ ಸದಸ್ಯರಾದ ಸುಧೀರ್ ಶೆಟ್ಟಿ, ರಾಜೇಶ್ ಮಾತನಾಡುತ್ತಾ, ದಾನಪತ್ರ ಪಡೆದುಕೊಂಡವರು ಬಳಿಕ ಆ ಜಾಗವನ್ನು ಅತಿಕ್ರಮಣ ಮಾಡಿದ ಪ್ರಕರಣಗಳ ಬಗ್ಗೆ ಈ ಹಿಂದೆಯೇ ಪಾಲಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

ಈ ಸಂದರ್ಭ ಪಾಲಿಕೆಯ ನೂತನ ಆಯುಕ್ತ ಮುಹಮ್ಮದ್ ನಝೀರ್ ಉತ್ತರಿಸಿ, ಉದ್ದಿಮೆ ಪರವಾನಿಗೆ ಸಂಬಂಧ ಪಾರ್ಕಿಂಗ್ ತೋರಿಸಿ, ಅಂಗಡಿ ನಿರ್ಮಿಸಿ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಬಗ್ಗೆ ಹಲವು ದೂರುಗಳು ಬಂದಿದ್ದು, ಈ ಬಗ್ಗೆ ನಗರ ಯೋಜನೆ ಸ್ಥಾಯಿ ಸಮಿತಿ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಹೇಳಿದರು.

ತ್ಯಾಜ್ಯ ವಿಲೇವಾರಿ ಬಗ್ಗೆ ಅಧಿಕಾರಿಗಳು ನುಣುಚಿಕೊಳ್ಳುವಂತಿಲ್ಲ: ಮೇಯರ್

ಸ್ವಚ್ಚ ಮಂಗಳೂರು ದೃಷ್ಟಿಯಿಂದ ಆ್ಯಂಟನಿ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಆದರೆ ಈ ಕಾರ್ಯ ಸಮರ್ಪವಾಗಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಬಾರದು ಎಂದು ಮೇಯರ್ ಹರಿನಾಥ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ನಿರುದ್ಯೋಗಿ ಯುವಕರು ವಾರ್ಡೊಂದಕ್ಕೆ 2 ಲಕ್ಷ ರೂ.ನಂತೆ ನಮಗೆ ನೀಡಿದರೆ ನಾವೇ ತ್ಯಾಜ್ಯ ವಿಲೇ ಮಾಡಿ ತೋರಿಸುವುದಾಗಿ ಈಗಾಗಲೇ ತಮ್ಮಲ್ಲಿ ಬಂದು ಮನವಿ ಮಾಡಿದ್ದಾರೆ. ಆದ್ದರಿಂದ ಆ್ಯಂಟನಿ ಸಂಸ್ಥೆಯವರು ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಸ್ವಚ್ಚ ಮಂಗಳೂರಿಗಾಗಿ ಮನೆ ಮನೆ ಕಸ ಸಂಗ್ರಹದ ಜತೆ ಮನೆಗಳವರು ಒಣ ಹಾಗೂ ಹಸಿ ಕಸವನ್ನು ವಿಂಗಡಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು. ಇದರ ಜತೆಯಲ್ಲೇ ಮನಪಾದ 60 ವಾರ್ಡ್‌ಗಳ ಪ್ರತಿ ಮನೆಗಳಿಗೆ ತಲಾ 2 ಕಸದ ತೊಟ್ಟಿ (ಬಕೆಟ್)ಗಳನ್ನು ನೀಡಿ ಕಸ ವಿಂಗಡನೆಗೆ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ಕಾಗಿ ‘ಮಿಕ್ಸ್ ಮಲ್ಪೊಡ್ಚಿ ಅಕ್ಕ, ಮಿಕ್ಸ್ ಮಾಡ್ಬೇಡಿ ಅಣ್ಣಾ’ ಎಂಬ ಘೋಷಣೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರ ಅನುಷ್ಠಾನ ಸಂಬಂಧ 2 ವಾರದೊಳಗೆ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಮೇಯರ್ ಹರಿನಾಥ್ ಸಭೆಯಲ್ಲಿ ತಿಳಿಸಿದರು.

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯವರು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಅವರಿಗೆ ಟೆಂಡರ್ ನೀಡುವ ಸಂದರ್ಭದಲ್ಲಿಯೇ ಕಸ ವಿಂಗಡನೆಗೆ ತಾಕೀತು ಮಾಡಲಾಗಿತ್ತಾದರೂ ಆ ಬಗ್ಗೆ ಕ್ರಮ ಆಗಿಲ್ಲ. ಕಸ ವಿಂಗಡನೆಗೆ ಸಂಬಂಧಿಸಿ 2011-12ನೆ ಸಾಲಿನಲ್ಲಿಯೇ ಮಣ್ಣಗುಡ್ಡೆ ಹಾಗೂ ಕೋರ್ಟ್ ವಾರ್ಡ್‌ಗಳನ್ನು ಮಾದರಿ ಯೋಜನೆಗೆ ಆಯ್ಕೆ ಮಾಡಿಕೊಂಡು ಅಲ್ಲಿನ ಮನೆಗಳಿಗೆ ಎರಡೆರಡು ಕಸದ ತೊಟ್ಟಿಗಳನ್ನು ವಿತರಿಸಲಾಗಿತ್ತು. ಆದರೆ ಎರಡು ವಾರ್ಡ್‌ಗಳಲ್ಲಿ ಆಗದ ಕಾರ್ಯ 60 ವಾರ್ಡ್‌ಗಳಲ್ಲಿ ಒಮ್ಮಿಂದೊಮ್ಮೆಲೇ ಮಾಡಲು ಸಾಧ್ಯವೇ ಎಂದು ಸದಸ್ಯರಾದ ಸುಧೀರ್ ಶೆಟ್ಟಿ, ವಿನಯ್‌ರಾಜ್, ಪ್ರೇಮಾನಂದ ಶೆಟ್ಟಿ ಮೊದಲಾದವರು ಪ್ರಶ್ನಿಸಿದರು.

ಈ ಸಂದರ್ಭ ಪರಿಸರ ಅಧಿಕಾರಿ ಮಧು ಮಾತನಾಡಿ, ವಾರದಲ್ಲಿ ಏಳು ದಿನ ಹಸಿ ಕಸ ಹಾಗೂ 1 ದಿನ ಒಣಕಸ ಸಂಗ್ರಹಿಸಲು ಗುರಿ ಇಡಲಾಗುವುದು. ಇದಕ್ಕಾಗಿ ಪ್ರತೀ ಮನೆಗೆ 2 ಬಕೆಟ್‌ಗಳನ್ನು ನೀಡುವ ಯೋಜನೆ ಇದು ಎಂದರು.

ಡೆಂಗ್ ಹಾವಳಿ ಬಗ್ಗೆ ಸದಸ್ಯರ ಆಕ್ರೋಶ

ಮನಪಾ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಮಾತನಾಡಿ, ಪಂಜಿಮೊಗರುವಿನಲ್ಲಿ ಹುಡುಗಿಯೊಬ್ಬಳು ಡೆಂಗ್‌ನಿಂದಾಗಿ ಮೃತಪಟ್ಟ ಮಾಹಿತಿ ಇದೆ ಎಂದರು. ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಮಾತನಾಡಿ, ಡೆಂಗ್ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಡಿಮೆ ಇದೆ. ಸಾವು ಪ್ರಕರಣ ಇಲ್ಲಿ ದಾಖಲಾಗಿಲ್ಲ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ ಜಾಸ್ತಿಯಿದೆ. ಜನರನ್ನು ತಪ್ಪುದಾರಿಗೆಳೆಯಬೇಡಿ. ಡೆಂಗ್ ಬಾರದಂತೆ ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು. ಉಪಮೇಯರ್ ಸುಮಿತ್ರ ಕರಿಯ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಪ್ಪಿ, ಕವಿತಾ ಸನಿಲ್, ಬಶೀರ್ ಅಹಮ್ಮದ್ ಉಪಸ್ಥಿತರಿದ್ದರು.

ಮಂಗಳೂರಿನ ಆಸ್ತಿ ವಿವರ ವೈಜ್ಞಾನಿಕ ಸರ್ವೇ

ಮಂಗಳೂರು ಪಾಲಿಕೆಗೆ ಕಂದಾಯ ಸೋರಿಕೆ ಆಗುತ್ತಿರುವ ಬಗ್ಗೆ ದೂರುಗಳು ಇರುವ ಹಿನ್ನೆಲಯೆಲ್ಲಿ ಸಂಬಂಧಪಟ್ಟ ಇಲಾಖೆಗೆ ಸಭೆ ಕರೆದು ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದೆ. ಆದರೆ ಪಾಲಿಕೆಯ ವ್ಯಾಪ್ತಿಯಲ್ಲಿರುವ ಆಸ್ತಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರಿಂದಾಗಿ ಕಂದಾಯ ಬೇಡಿಕೆ ನಿಗದಿ ಪಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಂದಾಯ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಂಗಳೂರಿನ ಪ್ರತೀ ಆಸ್ತಿಯ (ಖಾಸಗಿ-ಸರಕಾರಿ) ಸರ್ವೇಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ. 6 ಕೊನೆಯ ದಿನವಾಗಿದ್ದು, ಈಗಾಗಲೇ ಕೆಲ ಸಂಸ್ಥೆಗಳು ಆಸಕ್ತಿ ವಹಿಸಿವೆ. ಅರ್ಜಿಯ ಕೊನೆ ದಿನದ ಬಳಿಕ ಟೆಂಡರ್ ಮೂಲಕ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಿ ಸರ್ವೇ ಕಾರ್ಯ ನಡೆಯಲಿದೆ ಎಂದು ನೂತನ ಆಯುಕ್ತ ಮುಹಮ್ಮದ್ ನಝೀರ್ ಪಾಲಿಕೆ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News