ಮಂಗಳೂರು ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು

Update: 2016-07-29 14:22 GMT

ಮಂಗಳೂರು, ಜು.29: ನಗರದ ಪುರಭವನಕ್ಕೆ ದಲಿತೋದ್ಧಾರಕ ‘ಕುದ್ಮುಲ್ ರಂಗರಾವ್ ಸ್ಮಾರಕ’ ಅವರ ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯಿಸಿದೆ.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮುಖ್ಯ ಸಚೇತಕ ಶಶಿಧರ್ ಹೆಗ್ಡೆಯವರು ಮಂಡಿಸಿದ ಕಾರ್ಯಸೂಚಿಗೆ ಒಪ್ಪಿಗೆ ಸೂಚಿಸಲಾಯಿತು.

ಈ ಬಗ್ಗೆ ಪತ್ರಿಕಾ ಜಾಹೀರಾತಿನ ಮೂಲಕ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿ, ಪಾಲಿಕೆ ಅನುಮೋದನೆ ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿ ಪರಿಶೀಲಿಸಿ, ಅಲ್ಲಿಯೂ ಪತ್ರಿಕಾ ಜಾಹೀರಾತು ಮೂಲಕ ಸಾರ್ವಜನಿಕರ ಅಭಿಪ್ರಾಯ ಪಡೆದು, ಪೊಲೀಸ್ ಇಲಾಖೆ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಹಿತ ಪ್ರಕ್ರಿಯೆ ಮುಗಿಸಿದ ಬಳಿಕ ಜಿಲ್ಲಾಧಿಕಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅಧಿಕೃತವಾಗಿ ನಾಮಕರಣ ನಡೆಯಲಿದೆ.

ಕುದ್ಮುಲ್ ರಂಗ ರಾವ್(1859 ಜೂ.29-1928 ಜ.30) ಅವರು 1897ರಲ್ಲಿ ಹಿಂದುಳಿದ ವರ್ಗದ ಮಂಡಳಿ ಸ್ಥಾಪಿಸಿ, ಆ ಮೂಲಕ ದಲಿತರಿಗೆ ಶಿಕ್ಷಣ, ಉತ್ತಮ ಮನೆ, ಕುಡಿಯುವ ನೀರು, ಆರೋಗ್ಯ, ಸಶಕ್ತೀಕರಣ ಯೋಜನೆಗಳನ್ನು ರೂಪಿಸಿ, ಶೋಷಣೆಯಿಂದ ಮುಕ್ತಗಾಗಿ ಹೋರಾಟ ನಡೆಸಿದ್ದರು.

ಪುರಭವನದ ಎದುರು ಬರಲಿದೆ ಸ್ಕೈವಾಕ್!

ನಗರದ ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಸ್ಕೈವಾಕ್ (ಪಾದಾಚಾರಿ ಮೇಲ್ಸೇತುವೆ) ನಿರ್ಮಾಣಕ್ಕೆ ಕರಾವಳಿ ಅಭಿವೃದ್ದಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಬಗ್ಗೆ ಮನಪಾ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ವಿಷಯ ಪ್ರಸ್ತಾಪಿಸಲಾಗಿದ್ದು, ಇದನ್ನು ನಗರ ಯೋಜನಾ ಸ್ಥಾಯಿ ಸಮಿತಿಯಲ್ಲಿ ಚರ್ಚೆಗೆ ನಿರ್ಣಯಿಸಲಾಯಿತು.

ಸ್ಕೈವಾಕ್ ನಿರ್ಮಿಸಲು ಯೋಜಿಸಿರುವ ಸ್ಥಳ ಮನಪಾ ಅಧೀನಕ್ಕೆ ಒಳಪಟ್ಟಿರುವ ಕಾರಣ ಪಾಲಿಕೆಯ ನಿರಪೇಕ್ಷಣಾ ಪತ್ರ ಹಾಗೂ ಜಾಗದ ಮಾಲಕತ್ವ ದಾಖಲೆಯನ್ನು ಪಾಲಿಕೆ ನೀಡಲಿದೆ. ಸ್ಕೈವಾಕ್ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ.95 ಭಾಗವನ್ನು ಕರಾವಳಿ ಅಭಿವೃದ್ದಿ ಪ್ರಾಧಿಕಾರ ಹಾಗೂ ಶೇ.5 ಮಹಾನಗರ ಪಾಲಿಕೆ ಭರಿಸಬೇಕಿದೆ. ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ ಪ್ರಸ್ತಾವನೆ ಮಂಡಿಸಿದರು.

ಉಪಮೇಯರ್ ಸುಮಿತ್ರ ಕರಿಯ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಪ್ಪಿ, ಕವಿತಾ ಸನಿಲ್, ಬಶೀರ್ ಅಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News