ಮೂಡುಬಿದಿರೆ: ಮಾಯಾವತಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಧರಣಿ
ಮೂಡುಬಿದಿರೆ, ಜು.29: ದಲಿತ ನಾಯಕಿ ಮಾಯಾವತಿ ಅವರನ್ನು ನಿಂದಿಸಿರುವುದು ಹಾಗೂ ದಲಿತರ ಮೇಲೆ ಸಂಘ ಪರಿವಾರದವರಿಂದ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ದಲಿತ ಹಕ್ಕುಗಳ ರಕ್ಷಣಾ ಜಂಟಿ ಸಮಿತಿ ವತಿಯಿಂದ ಮೂಡುಬಿದಿರೆಯಲ್ಲಿ ಶುಕ್ರವಾರ ಧರಣಿ ನಡೆಯಿತು.
ಪ್ರಾಂತ ರೈತ ಸಂಘದ ಅಧ್ಯಕ್ಷ ಯಾದವಶೆಟ್ಟಿ ಮಾತನಾಡಿ, ದೇಶದಲ್ಲಿ ಅಸ್ಪ್ರಶ್ಯತೆ, ಬಡತನ ಇನ್ನೂ ಜೀವಂತವಾಗಿದ್ದು ಇದನ್ನು ಹೋಗಲಾಡಿಸಲು ಸಂಘಟಿತ ಹೋರಾಟ ನಡೆಸಬೇಕು. ಕೇಂದ್ರ ಸರಕಾರ ಜನವಿರೋಧಿ ನಿಲುವನ್ನು ಅನುಸರಿಸುತ್ತಿರುವುದು ಸರಿಯಲ್ಲ. ಗೋಹತ್ಯೆ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸರಕಾರದ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು ನಡೆಯುತ್ತಿದ್ದು, ಅದರ ಬಗ್ಗೆ ಕೇಂದ್ರದ ನಾಯಕರು ಏಕೆ ಚಕಾರವೆತ್ತುತ್ತಿಲ್ಲ?. ಯಾವುದೇ ಸರಕಾರ ದೀನ ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ವಿರುದ್ಧ ನೀತಿ ಅನುಸರಿಸುವುದಲ್ಲ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದರು.
ದಲಿತ ಹಕ್ಕುಗಳ ರಕ್ಷಣಾ ಜಂಟಿ ಸಮಿತಿಯ ಅಧ್ಯಕ್ಷ, ಬಿಎಸ್‌ಎನ್‌ಎಲ್ ಉದ್ಯೋಗಿ ಅಚ್ಯುತ ಸಂಪಿಗೆ, ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ ಸುದತ್ತ್ ಜೈನ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಶಿವಾನಂದ ಪಾಂಡ್ರು, ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ ಮಾರೂರು, ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕ ನೀಲಯ್ಯ, ಸಿಐಟಿಯು ನಾಯಕಿ ರಮಣಿ ಭಾಗವಹಿಸಿದ್ದರು. ರಮೇಶ್ ಬೋದಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಲಾಯಿತು.