ರಾಜ್ಯಸಭೆಯಲ್ಲಿ ನಿರುದ್ಯೋಗ ಗದ್ದಲ

Update: 2016-07-29 14:41 GMT

ಹೊಸದಿಲ್ಲಿ, ಜು.29: ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಶುಕ್ರವಾರ, ನಿರುದ್ಯೋಗ ಸಮಸ್ಯೆಯು ಕಲಾಪವನ್ನೇ ಬಲಿ ತೆಗೆದುಕೊಂಡಿದೆ.

ದೇಶದಲ್ಲಿ ನಿರಾಸೆಯ ವಾತಾವರಣವಿದೆಯೆಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಅದಕ್ಕೆ ತಿರುಗೇಟು ನೀಡಿದ ಬಿಜೆಪಿ, ನಿರಾಸೆ ಬಹುಶಃ ಕಾಂಗ್ರೆಸ್‌ನಲ್ಲಿದೆಯೆಂದು ಚುಚ್ಚಿತು. ಇದು ಕೋಲಾಹಲಕ್ಕೆ ಕಾರಣವಾಗಿ ಸದನ ಮುಂದೂಡಲ್ಪಟ್ಟಿತ್ತು.
ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಸರಕಾರವು ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರವಸೆ ನೀಡಿತ್ತು. ಅದು ಎಲ್ಲ ರೀತಿಯ ಘೋಷಣೆಗಳನ್ನು ಮಾಡುತ್ತಿದೆ. ಆದರೆ, ಯಾರಿಗೂ ಉದ್ಯೋಗ ದೊರೆಯುತ್ತಿಲ್ಲ ಎಂದರು.
ಅದಕ್ಕೆ ದನಿ ಗೂಡಿಸಿದ ಸಿಪಿಎಂ ಸದಸ್ಯ ಸೀತಾರಾಮ ಯೆಚೂರಿ, ಪ್ರತಿ ವರ್ಷ 1.3 ಕೋಟಿ ಯುವಕರು ಉದ್ಯೋಗ ಮಾರುಕಟ್ಟೆಗೆ ಸೇರುತ್ತಿದ್ದಾರೆ. ಸಂಘಟಿತ ವಲಯಗಳಲ್ಲಿರುವ ಉದ್ಯೋಗಗಳು ಶೇ.7ಕ್ಕಿಂತ ಕಡಿಮೆ. ಶೇ.93ರಷ್ಟು ಉದ್ಯೋಗಗಳು ಅಸಂಘಟಿತ ವಲಯದ ಉದ್ಯೋಗಗಳಾಗಿವೆಯೆಂದು ತಿಳಿಸಿದರು.
ಇದೊಂದು ಗಂಭೀರ ವಿಷಯವಾಗಿದೆ. ದೇಶದಲ್ಲಿ ಯುವಜನತೆ ನಿರಾಸೆಗೊಳ್ಳುವ ಪರಿಸ್ಥಿತಿ ಇದೆ. ಅವರಿಗೆ ಉದ್ಯೋಗ ಸಿಗುತ್ತಿಲ್ಲ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು. ಕೇವಲ ಸ್ಟಾರ್ಟಪ್ ಹಾಗೂ ಮೇಕಿನ್ ಇಂಡಿಯಾಗಳ ಬಗ್ಗೆ ಮಾತನಾಡುವುದರಿಂದ ಏನೂ ಪ್ರಯೋಜನವಾಗದೆಂದು ಕಾಂಗ್ರೆಸ್‌ನ ಆನಂದ ಶರ್ಮ ಹೇಳಿದರು.
ಅದಕ್ಕುತ್ತರಿಸಿದ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ, ದೇಶದಲ್ಲಿ ವಿಶ್ವಾಸ ಹಾಗೂ ಅಭಿವೃದ್ಧಿಯ ವಾತಾವರಣವಿದೆ. ಪ್ರತಿ ಕ್ಷೇತ್ರದಲ್ಲೂ ಉದ್ಯೋಗಾವಕಾಶ ವೃದ್ಧಿಯಾಗಿದೆ. ದೇಶದಲ್ಲಿ ನಿರಾಸೆ ತುಂಬಿದೆಯೆಂದು ಆನಂದ್ ಶರ್ಮ ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಮಿತ್ರರೊಳಗೇ ನಿರಾಸೆಯಿದ್ದರೆ ಅದಕ್ಕೆ ತಾವೇನೂ ಮಾಡಲಾಗುವುದಿಲ್ಲವೆಂದು ಛೇಡಿಸಿದರು.
ತಮ್ಮ ಪಕ್ಷದ ಹೆಸರು ಉಲ್ಲೇಖಿಸುವುದು ಹಾಗೂ ಅದು ನಿರಾಸೆಯಲ್ಲಿವೆಯೆಂದು ಹೇಳುವುದು ಅಸಾಂಸದೀಯವೆಂದು ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಅದಕ್ಕೆ ಪ್ರತಿ ಬಾಣ ಪ್ರಯೋಗಿಸಿದ ನಕ್ವಿ, ದೇಶದಲ್ಲಿ ನಿರಾಸೆಯ ವಾತಾವರಣವಿದೆಯೆನ್ನುವುದೂ ಅಷ್ಟೇ ಅಸಾಂಸದೀಯ ಎಂದರು.
ಅಸಾಂಸದೀಯ ಹೇಳಿಕೆಗಳನ್ನು ಕಡತದಿಂದ ಅಳಿಸಲಾಗುವುದೆಂದು ಉಪಸಭಾಪತಿ ಪಿ.ಜೆ. ಕುರಿಯನ್ ಎರಡೂ ಪಕ್ಷಗಳಿಗೆ ಭರವಸೆ ನೀಡಿದರು.
ಆದಾಗ್ಯೂ, ಕಾಂಗ್ರೆಸ್ ಸದಸ್ಯರು ಸದನದ ಅಂಗಳಕ್ಕಿಳಿದು ಘೋಷಣೆ ಕೂಗತೊಡಗಿದುದರಿಂದ ಕಲಾಪವನ್ನು ಮಧ್ಯಾಹ್ನ 12ರವರೆಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News