ಇಸ್ಲಾಮಾಬಾದ್‌ಗೆ ರಾಜನಾಥ್ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ಇಲ್ಲ : ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಹೊಸದಿಲ್ಲಿ, ಜು.29: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಆ.4ರಂದು ನಡೆಯಲಿರುವ ಸಾರ್ಕ್ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಹೋಗಲಿದ್ದಾರೆ. ಆದರೆ, ಈ ವೇಳೆ ಅವರು, ಪಾಕಿಸ್ತಾನದ ಯಾವನೇ ನಾಯಕನೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸುವುದಿಲ್ಲವೆಂದು ವಿದೇಶಾಂಗ ಸಚಿವಾಲಯವಿಂದು ಸ್ಪಷ್ಟಪಡಿಸಿದೆ.
ಗೃಹ ಸಚಿವರು ಸಾರ್ಕ್ ಸಮ್ಮೇಳನಕ್ಕಾಗಿ ಹೋಗುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಸಭೆ ನಡೆಯುವುದಿಲ್ಲವೆಂದು ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟಿಸಿದ್ದಾರೆ.
ರಾಜನಾಥ್ ಪಾಕಿಸ್ತಾನದಲ್ಲಿ ತನ್ನ ಸೋದ್ಯೋಗಿ ಚೌಧರಿ ನಿಸಾರ್ ಅಲಿಖಾನ್ ಹಾಗೂ ಪ್ರಧಾನಿ ನವಾಝ್ ಶರೀಫ್‌ರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆಂದು ಗೃಹ ಸಚಿವಾಲಯದ ಅಜ್ಞಾತ ಅಧಿಕಾರಿಯೊಬ್ಬನನ್ನುಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಅವರೀ ಸ್ಪಷ್ಟೀಕರಣ ನೀಡಿದ್ದಾರೆ.
ಇಸ್ಲಾಮಾಬಾದ್ ಭೇಟಿಯ ವೇಳೆ ರಾಜನಾಥ್, ಭಾರತದಲ್ಲಿ ಭಯೋತ್ಪಾದನೆ ನಿಲ್ಲಿಸುವಂತೆ, ಪಠಾಣ್‌ಕೋಟ್ ಹಾಗೂ ಮುಂಬೈ ಭಯೋತ್ಪಾದಕ ದಾಳಿಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ ಕಠಿಣವಾಗಿ ಸೂಚಿಸುವ ಸಾಧ್ಯತೆಯಿದೆಯೆಂದು ಗೃಹ ಸಚಿವಾಲಯದ ಮೂಲಗಳು ಹೇಳಿದ್ದವು.
ಹಿಝ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಶರೀಫ್‌ರ ಉದ್ವಿಗ್ನಕಾರಿ ಹೇಳಿಕೆ ಹಾಗೂ ಭಾರತ-ಪಾಕಿಸ್ತಾನಗಳ ಸಂಬಂಧ ಹೆಚ್ಚು ಹಳಸಿರುವ ಹಿನ್ನೆಲೆಯಲ್ಲಿ ರಾಜನಾಥ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.