×
Ad

ಬೆಳ್ತಂಗಡಿ: ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಧರಣಿ

Update: 2016-07-29 21:09 IST

ಬೆಳ್ತಂಗಡಿ, ಜು.29: ದಲಿತರ ಮೇಲಿನ ದಾಳಿಯು ಸಂಘಪರಿವಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು ಅವರ ಸಂಚಿಗೆ ಬಲಿಯಾದ ಯುವಕರು ಕ್ರಿಮಿನಲ್‌ಗಳಾಗಿ ಇಂತಹ ಹೇಯ ಕೃತ್ಯವೆಸಗುತ್ತಾರೆ. ಇದನ್ನು ವಿರೋಧಿಸಬೇಕಾಗಿದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.

ಶುಕ್ರವಾರ ದಲಿತ ಹಕ್ಕು ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಡಿವೈಎಫ್‌ಐ ಸಂಘಟನೆಗಳ ಬೆಳ್ತಂಗಡಿ ತಾಲೂಕು ಸಮಿತಿಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಸತ್ತ ದನಗಳ ಚರ್ಮ ತೆಗೆಯುವ ವೃತ್ತಿಯನ್ನೇ ಮಾಡುವ ದಲಿತರ ಚರ್ಮ ಸುಲಿದ ಸಂಘಪರಿವಾರದ ಹೇಯಕೃತ್ಯಗಳನ್ನು ಮಾನವೀಯತೆ ಇರುವ ನಾವು ಖಂಡಿಸಲೇಬೇಕು. ಜಾತಿ ಪದ್ದತಿ ನಾಶ ಆಗುವ ವರೆಗೆ ಹೋರಾಟಕ್ಕೆ ಸಿದ್ದರಾಗಬೇಕು. ಇಲ್ಲವೆಂದರೆ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡಲು ಈ ಕೋಮುವಾದಿಗಳು ಮುಂದಾಗುತ್ತಾರೆ. ನಿಜವಾದ ದೇಶದ್ರೋಹಿಗಳಾದ ಈ ಕೋಮುವಾದಿ ಶತ್ರುಗಳಾಗಿದ್ದಾರೆ ಎಂದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂದೇಶದಂತೆ ಭೂಮಿಯ ರಾಷ್ಟ್ರೀಕರಣಕ್ಕಾಗಿ, ನೈಜ ಸ್ವಾತಂತ್ರ್ಯಕ್ಕಾಗಿ ಹೋರಾಡೋಣ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ದಲಿತರಾದ ವಿಠಲ ಮಲೆಕುಡಿಯ, ಸುಂದರ ಮಲೆಕುಡಿಯರ ಮೇಲೆ ನಡೆದ ದಾಳಿ ಈ ತಾಲೂಕಿನಲ್ಲಿ ಪ್ರತ್ಯಕ್ಷವಾಗಿ ಇದೆ. ಸುಂದರ ಮಲೆಕುಡಿಯರಿಗೆ ಒಂದು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಭೂಮಿಯ ಹಕ್ಕುಗಳನ್ನು ದಲಿತರಿಗೆ ನೀಡುವಲ್ಲಿ ವಿಫಲವಾದ ಸರಕಾರಗಳು, ದಲಿತರ ಮೇಲಿನ ದಾಳಿಯನ್ನು ನಗಣ್ಯ ಮಾಡುತ್ತಿದೆ ಎಂದರು. ಮುಸ್ಲಿಮರನ್ನು ಶತ್ರುವಾಗಿಸಿ ದಾಳಿ ನಡೆಸುತ್ತಾ, ಸಂಘಟಿತಗೊಂಡ ಕೋಮುವಾದಿಗಳು ಆರೆಸ್ಸೆಸ್. ಸಿದ್ದಾಂತದ ಜಾರಿಗಾಗಿ ಭಾರತದ ಮೂಲನಿವಾಸಿಗಳಾದ ದಲಿತರನ್ನು ಓಡಿಸಲು ಈ ರೀತಿಯ ದೌರ್ಜನ್ಯ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಬೇಕು ಎಂದರು.

ಸಮಾಜ ಪರಿವರ್ತನಾ ವೇದಿಕೆಯ ಮುಖಂಡ ಡೀಕಯ್ಯ ಅವರು ಮಾತನಾಡಿ ಮನುವಾದಿ ಬ್ರಾಹ್ಮಣಶಾಹಿಗಳಿಂದ ದಲಿತ ಹಾಗೂ ಶೂದ್ರ ಜನಾಂಗ ಬಿಡುಗಡೆಯಾಗದೆ ನಮ್ಮ ಸಂವಿಧಾನದ ಉಳಿಸಲು ಅಸಾಧ್ಯ ಎಂದರು. ಮಹಿಳೆಯರನ್ನು ಮಾತೆ, ದೇವತೆ ಎಂದು ಗೌರವಿಸುವ ಭಾರತೀಯ ಸಂಸ್ಕೃತಿಯನ್ನೇ ಮರೆತ ಬಿಜೆಪಿ ಮುಖಂಡರೋರ್ವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಂತಹ ದಲಿತ ಮಹಿಳಾ ನಾಯಕಿ ಮಾಯಾವತಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸುತ್ತಾರೆಂದರೆ ಈ ಸಂಘಪರಿವಾರಗಳಿಗಿಂತ ಸಂಸ್ಕೃತಿಹೀನರು ಬೇರೆ ಯಾರಾದರೂ ಇದ್ದಾರೆಯೇ ಎಂದರು .

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ, ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಮಾತಾಡಿದರು.

ಸಿಪಿಐ(ಎಂ) ತಾಲೂಕು ಮುಖಂಡರಾದ ಜಯರಾಮ ಮಯ್ಯ, ನೆಬಿಸಾ, ದಲಿತ ಹಕ್ಕುಗಳ ಸಮಿತಿಯ ತಾಲೂಕು ಮುಖಂಡರಾದ ಬಾಬು ಕೊಯ್ಯೂರು, ಈಶ್ವರಿ ಶೇಖರ ವೇಣೂರು, ಕರ್ತ, ಬಾಬು ಕೊಕ್ಕಡ, ಡಿವೈಎಫ್‌ಐ ಮುಖಂಡರುಗಳಾದ ಧನಂಜಯ ಗೌಡ, ವಸಂತ ಟೈಲರ್, ಮುಹಮ್ಮದ್ ಅನಸ್, ಯಮುನಾ, ರಾಮಚಂದ್ರ, ಸಿಐಟಿಯು ಮುಖಂಡರುಗಳಾದ ಜಯಶ್ರೀ, ಇಂದಿರಾ, ಪುಷ್ಪಾ, ಮೀನಾಕ್ಷಿ, ಕುಸುಮಾವತಿ, ಗಿರಿಜ, ಲಾರೆನ್ಸ್, ರೋಹಿಣಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News