ಕೆಎಸ್ಸಾರ್ಟಿಸಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಮೃತ್ಯು
ಬೈಂದೂರು, ಜು.29: ಕೆಎಸ್ಸಾರ್ಟಿಸಿ ಬಸ್ ಚಾಲಕನ ನಿರ್ಲಕ್ಷದಿಂದ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟ ವಿದ್ಯಾರ್ಥಿಯೊಬ್ಬ ಹಿಂಬದಿಯಲ್ಲಿದ್ದ ಖಾಸಗಿ ಬಸ್ಸಿಗೆ ಬಡಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಜು.29ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ಉಪ್ಪುಂದ ಅಂಬಾಗಿಲಿನ ಗಣೇಶ್ ಹೊಟೇಲಿನ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಉಪ್ಪುಂದ ನಿವಾಸಿ ಸದಾಶಿವ ಶೆಟ್ಟಿ ಹಾಗೂ ಬೇಬಿ ಶೆಟ್ಟಿ ದಂಪತಿ ಪುತ್ರ ರಾಘವೇಂದ್ರ ಶೆಟ್ಟಿ(21) ಎಂದು ಗುರುತಿಸಲಾಗಿದೆ. ಇವರು ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ.
ನಿಲ್ದಾಣದಿಂದ ಸುಮಾರು 100ಅಡಿಯಷ್ಟು ದೂರ ಚಲಾಯಿಸಿದ ಬಸ್, ಉಪ್ಪುಂದ ಗಣೇಶ್ ಹೋಟೆಲ್ ಕಡೆಯಿಂದ ಹೊರಟು ಬರಲು ಮಣ್ಣು ರಸ್ತೆಯಲ್ಲಿ ನಿಂತಿದ್ದ ವಿಆರ್‌ಎಲ್ ಬಸ್‌ನ ಸೈಡ್ ಮಿರರ್‌ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಕೆಎಸ್ಸಾರ್ಟಿಸಿ ಬಸ್‌ನ ಹಿಂಬದಿಯ ಡೋರ್‌ನಲ್ಲಿದ್ದ ರಾಘವೇಂದ್ರ ಶೆಟ್ಟಿ ರಭಸವಾಗಿ ಹೊರಗೆ ಎಸೆಯಲ್ಪಟ್ಟು ವಿಆರ್‌ಎಲ್ ಬಸ್ಸಿಗೆ ಬಡಿದು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಕೂಡಲೇ ರಾಘವೇಂದ್ರರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಸ್ಸಿನಲ್ಲಿ ಕುಂದಾಪುರದ ಮೂರು ಕಾಲೇಜಿಗೆ ತೆರಳುವ 70ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪ್ರತಿದಿನ ಪ್ರಯಾಣಿಸುತ್ತಾರೆ. ಇಂದು 8:50ಕ್ಕೆ ಬರ ಬೇಕಾಗಿದ್ದ ಕೆಎಸ್ಸಾರ್ಟಿಸಿ ಬಸ್ 9ಗಂಟೆಗೆ ಉಪ್ಪುಂದ ಅಂಬಾಗಿಲು ಬಸ್ ನಿಲ್ದಾಣ ತಲುಪಿತು. ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರನ್ನು ಅವಸವರಸವಾಗಿ ಹತ್ತಿಸಿದ ನಿರ್ವಾಹಕ ಒಮ್ಮೆಲೆ ವಿಸೀಲ್ ಹಾಕಿದ. ಇದರಿಂದ ಬಸ್ ವೇಗವಾಗಿ ಹೊರಟಿದ್ದು, ಸರಿಯಾಗಿ ಬಸ್ ಹತ್ತದೆ ಡೋರ್‌ನಲ್ಲಿಯೇ ಇದ್ದ ರಾಘವೇಂದ್ರ ಶೆಟ್ಟಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಇದಕ್ಕೆ ಕೆಎಸ್ಸಾರ್ಟಿಸಿ ಬಸ್‌ನವರ ನಿರ್ಲಕ್ಷವೇ ಕಾರಣ ಎಂದು ಪ್ರತ್ಯಕ್ಷ ದರ್ಶಿ ವಿದ್ಯಾರ್ಥಿ ಆಶ್ರೀತ್ ಶೆಟ್ಟಿ ದೂರಿದ್ದಾರೆ.
ವಿದ್ಯಾರ್ಥಿಗಳಿಂದ ರಸ್ತೆತಡೆ
ಈ ಘಟನೆಯಿಂದ ತೀವ್ರ ಆಕ್ರೋಶ ಗೊಂಡ ವಿದ್ಯಾರ್ಥಿ ಸಮೂಹ ಬಸ್ ಚಾಲಕನ ನಿರ್ಲಕ್ಷದ ವಿರುದ್ಧ ಉಪ್ಪುಂದದಲ್ಲಿ ರಸ್ತೆಗೆ ಇಳಿದು ಪ್ರತಿಭಟಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು. ಅದೇ ರೀತಿ ಕುಂದಾಪುರ ಸರಕಾರಿ ಆಸ್ಪತ್ರೆಯ ಮುಂದೆ ನೆರೆದ ವಿದ್ಯಾರ್ಥಿಗಳು ಅಲ್ಲಿಯೂ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ಕುಂದಾಪುರದಲ್ಲಿ ಬಸ್ಸೊಂದಕ್ಕೆ ಕಲ್ಲು ಎಸೆದು ಹಾನಿ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಬೆಳಗ್ಗಿನ ಅವಧಿಯಲ್ಲಿ ಈ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕು. ಅಸಭ್ಯವಾಗಿ ವರ್ತಿ ಸುವ ನಿವಾರ್ಹಕರು ಹಾಗೂ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ವಿದ್ಯಾರ್ಥಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಉಪ್ಪುಂದ ಹಾಗೂ ಕುಂದಾಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಎಸ್ಸೈ ನಾಸೀರ್ ಹುಸೇನ್ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು. ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧೀನದಲ್ಲಿರುವ ಬಿ.ಎಂ.ಹೆಗ್ಡೆ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಶೆಟ್ಟಿಯ ಕುಟುಂಬಕ್ಕೆ ಸೊಸೈಟಿಯಿಂದ 2.5ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ಇಂದು ಕಾಲೇಜಿಗೆ ರಜೆ ಘೋಷಿಸಲಾಗಿತ್ತು.