×
Ad

ಗೂಡಿನಬಳಿ: ಅಪಘಾತದ ಗಾಯಾಳು ಮೃತ್ಯು

Update: 2016-07-29 23:29 IST

ವಿಟ್ಲ, ಜು.29: ನಿಂತಿದ್ದ ಟ್ಯಾಂಕರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರನ್ನು ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಅಣ್ಣು ಪೂಜಾರಿ (32) ಎಂದು ಹೆಸರಿಸಲಾಗಿದೆ.

ಕಳೆದ ಮಂಗಳವಾರ ರಾತ್ರಿ ಪಾಣೆಮಂಗಳೂರು ಕಡೆಯಿಂದ ಅಣ್ಣು ಪೂಜಾರಿ ಹಾಗೂ ಬಿ ಮೂಡ ಗ್ರಾಮದ ಪಲ್ಲಮಜಲು ಸಮೀಪದ ಕುಪ್ಪಿಲ ನಿವಾಸಿ ಯೋಗೀಶ ಎಂಬವರು ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಗೂಡಿನಬಳಿ ನೇತ್ರಾವತಿ ಸೇತುವೆಯ ಅಂತ್ಯದಲ್ಲಿದ್ದ ರಸ್ತೆ ಹಂಪ್ಸ್ ದಾಟಿ ಏಕಾಏಕಿ ರಸ್ತೆ ಬದಿಯ ಅನತಿ ದೂರದಲ್ಲಿ ನಿಲ್ಲಿಸಿದ್ದ ಆಯಿಲ್ ಟ್ಯಾಂಕರ್‌ಗೆ ಅಪ್ಪಳಿಸಿದ್ದರು.

ಘಟನೆಯಿಂದ ಯೋಗೀಶ್ ಹಾಗೂ ಅಣ್ಣು ಪೂಜಾರಿ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ತಕ್ಷಣ ಜಮಾಯಿಸಿದ ಗೂಡಿನಬಳಿ ನಿವಾಸಿಗಳು ಇಬ್ಬರನ್ನೂ ತುಂಬೆ ಹಾಗೂ ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಪೈಕಿ ಅಣ್ಣು ಪೂಜಾರಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ಯೋಗೀಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಅಣ್ಣು ಪೂಜಾರಿ ಏಳು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News