ಮಂಗಳೂರು: ಶಾಲೆಗೆ ದಾಳಿ ನಡೆಸಿದ ಶ್ರೀರಾಮಸೇನೆಯ ಕಾರ್ಯಕರ್ತರು

Update: 2016-07-30 16:15 GMT

ಮಂಗಳೂರು, ಜು.30: ನಗರದ ಹೊರವಲಯದ ನೀರುಮಾರ್ಗ ಸಮೀಪದ ಬೊಂಡಂತಿಲಪಡು ಎಂಬಲ್ಲಿರುವ ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಇಂದು ಬೆಳಗ್ಗೆ ಶಾಲೆಗೆ ದಾಳಿ ನಡೆಸಿ ವಿದ್ಯಾರ್ಥಿಗಳ ಎದುರಲ್ಲೇ ಅನಾಗರಿಕವಾಗಿ ವರ್ತಿಸಿದ ಘಟನೆ ನಡೆದಿದೆ.

ಬೆಳಗ್ಗೆ 9:45ಕ್ಕೆ ಸುಮಾರು 40 ಮಂದಿಯ ತಂಡವೊಂದು ಹಠಾತ್ ಆಗಿ ತರಗತಿ ಒಳಗೆ ಪ್ರವೇಶಿಸಿ ಅಧ್ಯಾಪಕರೊಂದಿಗೆ ವಾಗ್ವಾದಕ್ಕಿಳಿದು ತರಗತಿ ನಡೆಸಲು ತಡೆಯೊಡ್ಡಿದರಲ್ಲದೆ, ತರಗತಿಯೊಳಗೆ ಬೊಬ್ಬೆ ಹಾಕುತ್ತಾ ಮಕ್ಕಳು, ಅಧ್ಯಾಪಕರನ್ನು ನಿಂದಿಸಿ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆಂದು ಆರೋಪಿಸಲಾಗಿದೆ.

ಶಾಲೆಯ ಮುಂದೆ ಸೇರಿದ ಕಾರ್ಯಕರ್ತರ ತಂಡದಲ್ಲಿ ಸುಮಾರು 10ಮಂದಿಯ ತಂಡ 5ನೆ ತರಗತಿಯನ್ನು ಪ್ರವೇಶಿಸುವಾಗ ಅಲ್ಲಿನ ಅಧ್ಯಾಪಕಿಯನ್ನು ದೂಡಿ ಹಾಕಿ ಅನಂತರ 7ನೆ ತರಗತಿಗೆ ಪ್ರವೇಶಿಸಿದ್ದಾರೆ. ಅವರೊಂದಿಗೆ ಕೆಲವು ದೃಶ್ಯ ಮಾಧ್ಯಮದವರೂ ಇದ್ದರು. ಅನಂತರ ಸುಮಾರು 40 ಮಂದಿ ಏಕಾಏಕಿ ತರಗತಿ ಒಳಗೆ ನುಗ್ಗಿ ಬೊಬ್ಬೆ ಹಾಕುತ್ತಿದ್ದಂತೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಕೂಡ ಗಲಿಬಿಲಿಗೊಂಡು ಹೆದರಿ ಕಿರುಚಾಡಲು ಪ್ರಾರಂಭಿಸಿದರು. ಅಲ್ಲಿ ಅರಬಿಕ್ ತರಗತಿ ನಡೆಸುತ್ತಿದ್ದ ಅಧ್ಯಾಪಕರನ್ನು ನಿಂದಿಸಿ ಮಕ್ಕಳನ್ನು ಉದ್ದೇಶಿಸಿ ನೀವ್ಯಾಕೆ ಇಲ್ಲಿ ಕಲಿಯಲು ಬಂದಿದ್ದೀರಿ? ಎಂದರಲ್ಲದೆ, ದೃಶ್ಯ ಮಾಧ್ಯಮದವರನ್ನು ಉದ್ದೇಶಿಸಿ ಇಲ್ಲಿನ ವೀಡಿಯೊ ತೆಗೆಯಿರಿ, ಮಕ್ಕಳ ಫೊಟೊ ಬರಲಿ, ಅಧ್ಯಾಪಕನ ಫೊಟೊ ಬರಲಿ ಎಂಬಿತ್ಯಾದಿಯಾಗಿ ಮಕ್ಕಳ ಎದುರೇ ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ಸೈಂಟ್ ಥೋಮಸ್ ಶಾಲೆಯ ಅರಬಿಕ್ ಅಧ್ಯಾಪಕ ಅಬ್ದುಲ್ ಖಾದರ್ ತನ್ನೆದುರು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸೈಂಟ್ ಥೋಮಸ್ ಶಾಲೆಯಲ್ಲಿ ಜರ್ಮನಿ, ಫ್ರೆಂಚ್ ಹಾಗೂ ಅರೆಬಿಕ್ ಭಾಷೆಯನ್ನು ಬೋಧಿಸಲಾಗುತ್ತಿತ್ತು. ಆದರೆ, ವರ್ಷದ ಹಿಂದೆ ಜರ್ಮನಿ ಭಾಷೆಯನ್ನು ನಿಲ್ಲಿಸಿ ಅರಬಿಕ್ ಭಾಷೆಯನ್ನು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಯುಲು ಕಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಲ್ಲಿಸಲಾಗಿತ್ತು. ಫ್ರೆಂಚ್ ಹಾಗೂ ಅರಬಿಕ್ ಭಾಷೆಯನ್ನು ಮುಂದುವರಿಸಲಾಗಿತ್ತು. ಕಳೆದ ಒಂದು ವರ್ಷ ಎರಡು ತಿಂಗಳುಗಳಿಂದ ಸೈಂಟ್ ಥೋಮಸ್ ಶಾಲೆಯಲ್ಲಿ ಮಕ್ಕಳಿಗೆ ಅರಬಿಕ್ ಭಾಷೆ ಮಾತನಾಡಲು ಮತ್ತು ಅದರ ಲಿಪಿಯನ್ನು ಕಲಿಸುತ್ತಿದ್ದೇನೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಬೇಧಭಾವ ಇಲ್ಲದೆ ಸುಮಾರು 60 ವಿದ್ಯಾರ್ಥಿಗಳು ಅರಬಿಕ್ ಭಾಷೆಯ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ಭಾಷೆಗೆ ಈವರೆಗೂ ವಿದ್ಯಾರ್ಥಿಗಳ ಹೆತ್ತವರಿಂದ ವಿರೋಧ ಬಂದಿಲ್ಲ. ಈ ಸಂಬಂಧ ಶಾಲಾ ಆಡಳಿತ ಸಮಿತಿಯು ಹೆತ್ತವರ ಸಭೆಯನ್ನೂ ಕರೆಯುತ್ತಿದೆ. ಇದೇ ಜುಲೈ ತಿಂಗಳಲ್ಲಿ ನಡೆದ ಮಕ್ಕಳ ಪೋಷಕರ ಸಭೆಯಲ್ಲೂ ಫ್ರೆಂಚ್ ಮತ್ತು ಅರಬಿಕ್ ಭಾಷೆ ಕಲಿಸಬೇಕೆಂಬ ಒತ್ತಾಯ ಪೋಷಕರಿಂದ ಕೇಳಿ ಬಂದಿತ್ತು. ಅದರಂತೆ ಶಾಲಾ ಆಡಳಿತ ಸಮಿತಿಯು ಈ ಎರಡೂ ಭಾಷೆಯನ್ನು ಈ ವರ್ಷವೂ ಮುಂದುವರಿಸಿದೆ. 4 ಮತ್ತು 5ನೆ ತರಗತಿಗೆ ಕರಾಟೆ ತರಗತಿ, 6ನೆ ತರಗತಿಗೆ ಪ್ರೆಂಚ್ ಭಾಷೆ ಹಾಗೂ 7ನೆ ತರಗತಿಯ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಅಬ್ದುಲ್ ಖಾದರ್ ತಿಳಿಸಿದ್ದಾರೆ.

 ಘಟನೆಯ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಬ್ರಾಕ್ಸ್ ಬೆಳಗ್ಗೆ ಸುಮಾರು 9:30ರ ಹೊತ್ತಿಗೆ ಸುಮಾರು 35ರಿಂದ 40 ಮಂದಿಯ ತಂಡ ಶಾಲೆಗೆ ದಾಳಿ ನಡೆಸಿದೆ. ತರಗತಿಗೆ ನುಗ್ಗಿ ಅವರು ವರ್ತಿಸಿರುವ ರೀತಿ ತೀರಾ ಖಂಡನೀಯ. ಮಕ್ಕಳನ್ನು ಅವರನ್ನು ನೋಡಿ ಹೆದರಿ ಓಡಿ ಹೋಗುವ ಪರಿಸ್ಥಿತಿ ಉದ್ಭವಿಸಿತ್ತು. ನಾನು ಕೂಡ ಗಾಬರಿಗೊಂಡು ತರಗತಿ ಕಡೆಗೆ ಹೋಗಿ ದಾಳಿಕೋರರನ್ನು ಕೇಳಿದಾಗ ನಾವು ರಾಮ ಸೇನೆಯವರು ಎಂದು ಬೆದರಿಸಿರುವುದಾಗಿ ತಿಳಿಸಿದ್ದಾರೆ.

ರಾಮ ಸೇನೆಯ ಕಾರ್ಯಕರ್ತರೊಂದಿಗೆ ಕೆಲವು ದೃಶ್ಯ ಮಾಧ್ಯಮದವರು, ಫೋಟೊಗ್ರಾಫರ್ಸ್‌ ಮತ್ತು ಒಂದು ಮೈಕ್ ಕೂಡ ಜೊತೆಗೆ ತಂದಿದ್ದರು. ಮಕ್ಕಳೆದುರು ಈ ರೀತಿಯಾಗಿ ವರ್ತಿಸಬೇಡಿ. ಇದು ಸರಿಯಾದ ಕ್ರಮವಲ್ಲ. ಮಾತನಾಡಲಿಕ್ಕಿದ್ದರೆ ಕಚೇರಿಯಲ್ಲಿ ಕುಳಿತುಕೊಂಡು ಮಾತನಾಡುವ ಎಂದು ಅವರನ್ನು ಕಚೇರಿಗೆ ಕರೆಸಿ ಮಾತನಾಡಿದ್ದೇನೆ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಶಾಲೆಯ ಪಠ್ಯಪುಸ್ತಕಗಳ ಜೊತೆಗೆ ಹೆಚ್ಚುವರಿಯಾಗಿ ನಾವು ಫ್ರೆಂಚ್, ಜರ್ಮನಿ, ಅರಬಿಕ್ ಮತ್ತು ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇವೆ. ಪ್ರಾರಂಭದಲ್ಲಿ ಜರ್ಮನಿ ಮತ್ತು ಪ್ರೆಂಚ್ ಭಾಷೆಯನ್ನು ಕಲಿಸುತ್ತಿದ್ದೆವು. ಜರ್ಮನಿಯಲ್ಲಿ ವಿದ್ಯಾರ್ಥಿಗಳು ಅಷ್ಟೇನೂ ಆಸಕ್ತಿ ತೋರಿಸದಿರುವುದರಿಂದ ಜರ್ಮನಿಯನ್ನು ರದ್ದುಪಡಿಸಿ ಫ್ರೆಂಚ್ ಮತ್ತು ಅರಬಿಕ್‌ನ್ನು ಪ್ರಾಂಭಿಸಿದ್ದೇವೆ. ಎರಡು ವರ್ಷಗಳಿಂದ ಅರಬಿಕ್ ಬಾಷೆಯನ್ನು ಕಲಿಸುತ್ತಿದ್ದೇವೆ. ಅದರಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿಸುವುದರಿಂದ ಅರಬಿಕ್‌ನ್ನು ಈ ವರ್ಷವೂ ಮುಂದುವರಿಸಿದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಬೇಧವಿಲ್ಲದೆ ಎಲ್ಲಾ ಮಕ್ಕಳು ಅರಬಿಕ್ ಭಾಷೆಯನ್ನು ಕಲಿಯುತ್ತಿದ್ದಾರೆ. ಇದನ್ನು ಒತ್ತಾಯಪೂರ್ವಕವಾಗಿ ಕಲಿಸುತ್ತಿಲ್ಲ. ಈ ಭಾಷೆ ಕಲಿಸುವ ಬಗ್ಗೆ ಆಗಾಗ ಮಕ್ಕಳ ಪೋಷಕರ ಸಭೆಯನ್ನು ಕರೆಯುತ್ತಿದ್ದೇವೆ. ಅದರಂತೆ ಇದೇ ಜುಲೈ 4ರಂದು ಕೂಡ ಪೋಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲೂ ಅರಬಿಕ್ ಭಾಷೆಯನ್ನು ಮುಂದುವರಿಸುವಂತೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವರ್ಷವೂ ಅರಬಿಕ್ ಬಾಷೆಯನ್ನು ಮುಂದುವರಿಸಿದ್ದೇವೆ. ಒಟ್ಟು 59 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಧರ್ಮದ ಬೇಧವಿಲ್ಲದೆ ಅರಬಿಕ್ ಕಲಿಯುತ್ತಿದ್ದಾರೆ. ಈ 40 ವಿದ್ಯಾರ್ಥಿ ಶಾಲಾ ಹೆಚ್ಚವರಿ ಅವಧಿಯಲ್ಲಿ ಬಂದು ಕಲಿಯುತ್ತಾರೆ ಎಂದು ಮೆಲ್ವಿನ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News