ಸ್ವಚ್ಛ ಮಂಗಳೂರಿಗಾಗಿ ಕಾರ್ಯಪಡೆ ರಚನೆ

Update: 2016-07-30 08:23 GMT

ಮಂಗಳೂರು, ಜು.30: ಸ್ವಚ್ಛ ಭಾರತ್ ಮಿಷನ್ ಅಭಿಯಾನದ ಸ್ವಚ್ಛ ಸರ್ವೇಕ್ಷಣ 2017ರ ಕುರಿತು ಕೇಂದ್ರದ ಸಮೀಕ್ಷಾ ತಂಡ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಲು ಮೇಯರ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆಗೆ ಅಂಗೀಕಾರ ದೊರಕಿದೆ.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಈ ಕುರಿತಾದ ಕಾರ್ಯಸೂಚಿಗೆ ಒಪ್ಪಿಗೆ ನೀಡಲಾಗಿದ್ದು, ಆಯುಕ್ತರು ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಉಪ ಮೇಯರ್, ವಿವಿಧ ಸ್ಥಾಯಿಸಮಿತಿಗಳ ಅಧ್ಯಕ್ಷರು, ಮುಖ್ಯ ಸಚೇತಕರು, ವಿಪಕ್ಷ ನಾಯಕರು, ಉಪ ಆಯುಕ್ತ (ಆಡಳಿತ), ಆರೋಗ್ಯಾಧಿಕಾರಿ, ಕೆಸಿಸಿಐ , ಹೊಟೇಲ್ ಮ್ಯಾನೇಜ್‌ಮೆಂಟ್, ಜಿಲ್ಲಾ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮ, ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಶನ್, ಕ್ರೆಡೈ, ರೋಟರಿ ಕ್ಲಬಂ, ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಎನ್ನೆಸ್ಸ್ ಸಂಘಟಕರು, ಆರೋಗ್ಯ ಮತ್ತು ಅಭಿವೃದ್ದಿ ಕೇಂದ್ರದ ಮುಖ್ಯಸ್ಥರು, ಜಿಲ್ಲಾ ವಾರ್ತಾಧಿಕಾರಿ ಕಾರ್ಯಪಡೆಯ ಸದಸ್ಯರಾಗಿರುತ್ತಾರೆ.

ಕಾರ್ಯಪಡೆ ಸಮಿತಿಯು ಆಗಾಗ್ಗೆ ಸಭೆ ಸೇರಿ ಸ್ವಚ್ಛ ಮಂಗಳೂರು ಅಭಿಯಾನದ ಕುರಿತು ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು, ಸಾರ್ವಜನಿಕ ಶೌಚಾಲಯ ಉಪಯೋಗದ ಅರಿವು ಮೂಡಿಸುವುದು, ಹಸಿ ಕಸ ಮತ್ತು ಒಣಕಸ ಸಂಗ್ರಹಿಸಿ, ಪ್ರತ್ಯೇಕಿಸಿ ವಿಲೇಗೊಳಿಸುವ ಬಗ್ಗೆ ಅರಿವು ಮೂಡಿಸುವುದು, ವಾಣಿಜ್ಯ ಉದ್ದಿಮೆಗಳಿಂದ ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆ ಕುರಿತು ಕ್ರಮ ವಹಿಸುವುದು, ಘನತ್ಯಾಜ್ಯವನ್ನು ಸಮರ್ಪಕ ಸಂಸ್ಕರಣೆ ಹಾಗೂ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಟ್ಟೆ ಚೀಲ ಉಪಯೋಗಕ್ಕೆ ಕ್ರಮ ಕೈಗೊಳ್ಳುವ ಕುರಿತು ಕಾರ್ಯಪಡೆ ಗಮನ ಹರಿಸಬೇಕಾಗಿದೆ. ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ತಂಡ 2017ರ ಜನವರಿ 4ರಿಂದ ಫೆಬ್ರವರಿ 4ರ ಅವಧಿಯಲ್ಲಿ ಮಂಗಳೂರು ನಗರಕ್ಕೆ ಭೇಟಿ ಸ್ವಚ್ಛ ಭಾರತ್ ಮಿಶನ್ ಅಭಿಯಾನದಡಿ ಮಂಗಳೂರು ನಗರವನ್ನು ಆಯ್ಕೆ ಮಾಡುವ ಕುರಿತಂತೆ ಈ ಮೇಲಿನ ಅಂಶಗಳನ್ನು ಪರಿಗಣಿಸಲಿದೆ.

ಕಳೆದ ವರ್ಷ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟಿರುವ ಮಂಗಳೂರು ಮಹಾನಗರ ಪಾಲಿಕೆ ಈ ಬಾರಿ ಪ್ರಥಮ ಸ್ಥಾನಕ್ಕೆ ಈ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News