ತನ್ನ ನಾಲ್ಕನೆ ವಯಸ್ಸಿನಲ್ಲಿ ಮುದುಕನಂತಾದ ಬಾಲಕ!
ಬಾಂಗ್ಲಾದೇಶ, ಜುಲೈ 30:ಬ್ರಾಡ್‌ಪಿಟ್ ನಟನೆಯ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ಎಂಬ ಸಿನೆಮಾವನ್ನು ಎಲ್ಲರೂ ನೋಡಿರಬಹುದು. ಆದರೆ ಬೆಂಜಮಿನ್ ಬಟ್ಟನ್‌ನಂತೆ ಎಳವೆಯಲ್ಲಿಯೇ ಮುದುಕನಂತಾದ ಬಾಲಕನ ಕತೆಯಿದು. ತನ್ನ ನಾಲ್ಕನೆ ವರ್ಷ ವಯಸ್ಸಿನಲ್ಲಿ ಮುದುಕನಂತಾದ ಈ ಬಾಲಕನ ದಯನೀಯ ಚಿತ್ರ ಇದೀಗ ಜಗತ್ತಿನ ಮುಂದಿದೆ.
ದಕ್ಷಿಣ ಬಾಂಗ್ಲಾದೇಶದ ಮಗೂರದ ಬಯೇಸಿದ್ ಹುಸೈನ್ ಎಂಬ ಬಾಲಕನನ್ನು ವಿಧಿಹೀಗೆ ವಿಚಿತ್ರವಾಗಿ ಬೇಟೆಯಾಡುತ್ತಿದೆ ಎನ್ನಬಹುದು. ಈ ಬಾಲಕ ಅತ್ಯಪೂರ್ವವಾದ ರೋಗಕ್ಕೆ ತುತ್ತಾಗಿದ್ದಾನೆ. ಬಾಲಕನ ಶರೀರವಿಡೀ ಮುದುಕರಂತೆ ನೆರಿಗೆಗಳು ಹಾಗೂ ಉಬ್ಬಿದಂತೆ ಕಾಣಿಸುತ್ತಿದೆ. ಕಣ್ಣುಗಳು ಒಳಕ್ಕೆ ಹೋಗಿವೆ.ಹಲ್ಲುಗಳು ಕೂಡಾ ಮುದುಕರಂತಾಗಿದೆ. ಅಂತೂ ಮುದುಕನಂತೆ ಈ ನಾಲ್ಕುವರ್ಷದ ಪುಟಾಣಿ ಕಾಣಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಶರೀರ ಮುದುಕರಂತಾಗಿದ್ದರೂ ಮನಸ್ಸು ಮಾತ್ರ ನಾಲ್ಕುವರ್ಷದ ಬಾಲಕನದ್ದೇ ಆಗಿದೆ. ಗೆಳೆಯರೊಂದಿಗೆ ಆಡುತ್ತಾ ಸಮಯ ಕಳೆಯಲುಬಯಸುವ ಬಯೇಸಿದ್‌ನಹತ್ತಿರ ಬರಲು ಮಕ್ಕಳು ಮಾತ್ರವಲ್ಲ ಹಿರಿಯರೇ ಹೆದರುತ್ತಿದ್ದಾರೆನ್ನಲಾಗಿದೆ.
ಬಯೇಸಿದ್‌ನಿಗೆ ಪ್ರೋಗೇರಿಯ ಎಂಬ ರೋಗವಿದ್ದು ಬಾಲಕ ಸಹಜ ವಯಸ್ಸಿಗಿಂತ ಎಂಟು ಪಟ್ಟು ಹೆಚ್ಚು ಪ್ರಾಯ ಆದಂತೆ ಕಾಣಿಸುತ್ತಿದ್ದಾನೆ. ಇಂತಹ ರೋಗಪೀಡಿತ ಮಕ್ಕಳು ಸರಾಸರಿ ಹದಿಮೂರುವರ್ಷದವರೆಗೆ ಮಾತ್ರ ಬದುಕುಳಿಯುತ್ತಾರೆ ಎನ್ನಲಾಗಿದೆ. ಹದಿಮೂರನೆ ವರ್ಷದೊಳಗೆ ಹೃದ್ರೋಗದ ಕಾರಣದಿಂದ ಇಂತಹ ಮಕ್ಕಳು ಮೃತರಾಗುತ್ತಾರೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.ಲೊವೆಲು ಹುಸೈನ್ ಮತ್ತು ತೃಪ್ತಿಯ ಮಗನಾಗಿ 2012ರಲ್ಲಿ ಬಯೇಸಿದ್ ಹುಸೈನ್ ಜನಿಸಿದ್ದು ಊರಿನ ಎಲ್ಲ ವೈದ್ಯರಿಗೂ ತೋರಿಸಿ ಆಗಿದೆ. ಹುಟ್ಟಿದಾಗ ಮಗನನ್ನು ನೋಡುವುದಕ್ಕೂ ಹೆದರಿಕೆ ಆಗುತ್ತಿತ್ತು ಎಂದು ತಾಯಿ ತೃಪ್ತಿ ಹೇಳುತ್ತಾರೆ ಎಂದು ವರದಿಯಾಗಿದೆ.
ಅಪೂರ್ವ ರೋಗಕ್ಕೆ ಗುರಿಯಾದ ಮಗು ಆರಂಭದಲ್ಲಿ ಊರಿನವರಿಗೆ ಕುತೂಹಲದ ವಸ್ತುವಾಗಿದ್ದ. ನಂತರ ಆತ ಬೆಳೆಯಲಾರಂಭಿಸಿದನಂತರ ಅವರು ಹೆದರ ತೊಡಗಿದರು. ಇಂತಹ ಓರ್ವ ಮಗನನ್ನು ಸಂರಕ್ಷಿಸಲು ಯಾರಿಂದಲೂ ತಮಗೆ ನೆರವು ಸಿಕ್ಕಿಲ್ಲ ಎಂದು ತೃಪ್ತಿ ಹೇಳುತ್ತಿದ್ದಾರೆ.