×
Ad

ಪುತ್ತೂರು: ದಲಿತರ ಮೇಲಿನ ದೌರ್ಜನ್ಯ ಖಂಡನಾ ನಿರ್ಣಯಕ್ಕೆ ದಲಿತ ಮುಖಂಡರ ಆಗ್ರಹ

Update: 2016-07-30 15:40 IST

ಪುತ್ತೂರು, ಜು.30: ಕೇಂದ್ರ ಸರಕಾರ, ಸಂಘ ಪರಿವಾರದಿಂದ ದಲಿತರ ಮೇಲೆ ದೇಶದಲ್ಲಿ ದೌರ್ಜನ್ಯ ನಡೆಯುತ್ತಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತರನ್ನು ನೋಡಿಕೊಳ್ಳಲಾಗುತ್ತಿದೆ. ಇದು ಅತೀವ ನೋವು ತರುವ ವಿಚಾರ. ಈ ಕುರಿತು ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರಕಾರ, ಪ್ರಧಾನಿಯವರಿಗೆ ಕಳುಹಿಸಬೇಕು ಎಂಬ ಆಗ್ರಹ ಪುತ್ತೂರಿನಲ್ಲಿ ನಡೆದ ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆಗಳ ಸಭೆಯಲ್ಲಿ ದಲಿತ ಮುಖಂಡರಿಂದ ವ್ಯಕ್ತವಾಯಿತು.

ಸಮಿತಿ ಸಭೆಯು ಪುತ್ತೂರು ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ಸೇಸಪ್ಪ ನೆಕ್ಕಿಲು, ಅವರು ಉತ್ತರ ಪ್ರದೇಶ, ಗುಜರಾತ್‌ನಲ್ಲಿ ನಡೆದ ಘಟನೆಗಳನ್ನು ಗಮನಿಸಿದಾಗ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಭೀಕರತೆ ಅರಿವಾಗುತ್ತದೆ. ದಲಿತರನ್ನು ಇನ್ನೂ ಕೀಳಾಗಿ ಕಾಣುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಆರೋಪಿಸಿದರು. ಇದಕ್ಕೆ ಇನ್ನಿತರ ದಲಿತ ಮುಖಂಡರು ಧ್ವನಿಗೂಡಿಸಿ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಕುರಿತು ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮಿನಿ ವಿಧಾನಸೌಧದ ಮುಂಭಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರ ಪ್ರತಿಮೆ ಆಗಬೇಕೆಂಬ ದಲಿತರ ಹಲವಾರು ವರ್ಷಗಳ ಬೇಡಿಕೆಗೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ ದಲಿತ ಮುಖಂಡ ಎಂ.ಕೂಸಪ್ಪ, ನೊಂದವರ ಬೇಡಿಕೆಗೆ ಸ್ಪಂದನೆ ಲಭಿಸದೇ ಇರುವುದು ನಿರಾಶಾದಾಯಕವಾಗಿದೆ. ಪರಿಶಿಷ್ಟರಿಗೆಂದು ಮಂಜೂರುಗೊಂಡ ಅನುದಾನಗಳು ಹಿಂದಕ್ಕೆ ಹೋದರೂ ಅಗತ್ಯ ಕೆಲಸಗಳಿಗೆ ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.

ರೋಪಕ್ಕೆ ಸ್ಪಷ್ಟನೆ ನೀಡಿದ ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣ ಭಟ್, ಅವರು ಪ.ಜಾತಿ ಮತ್ತು ಪಂಗಡದ ಕಾಯ್ದೆಯಂತೆ ಯಾವುದೇ ಅನುದಾನ ಹಿಂತಿರುಗಿ ಹೋಗುವುದಿಲ್ಲ. ತಾಲೂಕಿನ ಎಲ್ಲಾ ಅನುದಾನಗಳು ವಿನಿಯೋಗವಾಗಿದೆ. ಡಾ. ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕುರಿತಂತೆ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸೋಣ ಎಂದು ಸಲಹೆ ನೀಡಿದರು.

ನಗರದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಿಸುವಂತೆ ದಲಿತ ಸಂಘಟನೆಗಳು ಕಳೆದ 15 ವರ್ಷಗಳಿಂದ ಬೇಡಿಕೆಯನ್ನು ನೀಡುತ್ತಾ ಬಂದಿದ್ದರೂ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಪುತ್ತೂರಿನ ಸಬ್ ರಿಜಿಸ್ಟ್ರಾರ್ ಕಚೇರಿ ಜಾಗದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ನಮ್ಮ ಬೇಡಿಕೆಯಿದ್ದರೂ ಅದಕ್ಕೆ ವಿನಾ ಕಾರಣ ಅಡ್ಡಿ ಪಡಿಸಲಾಗುತ್ತಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಎಂ. ಕೂಸಪ್ಪ ಅವರು ಆಗ್ರಹಿಸಿದರು.

ಸಭೆಯಲ್ಲಿ ವಿದ್ಯಾರ್ಥಿಗಳ ಬಸ್ಸು ಪಾಸ್‌ಗಳನ್ನು ಪುತ್ತೂರು ಬಸ್ಸು ನಿಲ್ದಾಣದ ತನಕ ವಿಸ್ತರಣೆ, ಆರ್ಯಾಪು ಗ್ರಾಮದ ಕುಂಜೂರುಪಂಜ ಪರಿಶಿಷ್ಟ ಜಾತಿ ಕಾಲನಿ ರಸ್ತೆ ತೆರವುಗೊಳಿಸಲು, ನಿಡ್ಪಳ್ಳಿ ಗ್ರಾಮ ಕುಕ್ಕುಪುಣಿ ರಸ್ತೆ ನಿರ್ಮಾಣ ತಕರಾರು ಪರಿಹಾರಕ್ಕೆ ಕ್ರಮ, ನೆಟ್ಟಣಿಗೆ ಮುಡ್ನೂರು ಗ್ರಾಮದ ತುಕ್ರ ಅವರ ಸಾವಿನ ಕುರಿತ ಪೋಸ್ಟ್ ಮಾರ್ಟಂ ರಿಪೋರ್ಟ್ ವಿಚಾರ, ಹಿರೆಬಂಡಾಡಿ ಗ್ರಾಪಂನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಪ್ರಕರಣ, ಗ್ರಾ.ಪಂ. ಸಭೆಗಳಿಗೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವಂತೆ ಒತ್ತಾಯ, ಹಿರೆಬಂಡಾಡಿಯ ಅಗರಿಯಲ್ಲಿ ನೀರಿನ ಸಮಸ್ಯೆ, ನಗರಸಬಾ ವ್ಯಾಪ್ತಿಯಲ್ಲಿ ಪ.ಜಾತಿ ಕಾಲನಿಗೆ ಸಮರ್ಪಕ ಕುಡಿಯುವ ನೀರಿನ, ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯ ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.

ಪುತ್ತೂರು ತಹಶೀಲ್ದಾರ್ ಪುಟ್ಟಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣ ಭಟ್, ಪುತ್ತೂರು ನಗರ ಪೊಲೀಸ್ ಠಾಣೆಯ ಎಸೈ ಅಬ್ದುಲ್ ಖಾದರ್, ಎಎಸೈ ಚೆಲುವಯ್ಯ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News