ಆಧುನಿಕ ವೈದ್ಯಕೀಯ ಸೌಲಭ್ಯಗಳು ಜನಸಾಮಾನ್ಯರ ಅಭಿವೃದ್ಧಿಗೆ ಬಳಕೆಯಾಗಲಿ: ವಜುಭಾಯಿ ರುಢಾಭಾಯಿ ವಾಲಾ
ಮಂಗಳೂರು, ಜು.30: ಆಧುನಿಕ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸೇವೆ ಸೌಲಭ್ಯಗಳು ದೇಶದ ಜನಸಾಮಾನ್ಯರ (ಆಮ್ ಆದ್ಮಿಗಳ)ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಕರ್ನಾಟಕದ ರಾಜ್ಯಪಾಲ ವಜುಬಾಯಿ ರುಢಾಭಾಯಿ ವಾಲಾ ಕರೆ ನೀಡಿದರು.
ಅವರು ಇಂದು ಯೆನೆಪೊಯ ವಿಶ್ವ ವಿದ್ಯಾನಿಲಯದಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯ ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರ, ಮುಂದುವರಿದ ಸಂಶೋಧನಾ ಕೇಂದ್ರಗಳು ಹಾಗೂ ರೊಬೋಟೆಕ್ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ದೇಶ ವಿಶ್ವದಲ್ಲಿಯೇ ಉನ್ನತ ಸಾಧನೆ ಮಾಡಲು ಸಾಮರ್ಥ್ಯವಿರುವ ಪ್ರತಿಭಾವಂತರನ್ನು ಹೊಂದಿದೆ. ಸಂಪತ್ತು, ಜ್ಞಾನ, ಶಕ್ತಿ ಎಲ್ಲವೂ ನಮ್ಮ ಬಳಿ ಇದೆ. ಈ ಸಂಪತ್ತು ಸಮಾಜದ ಎಲ್ಲರ ಒಳಿತಿಗಾಗಿ ಮತ್ತು ಮನುಕುಲದ ಸೇವೆಗಾಗಿ ಸಮರ್ಪಣೆಯಾಗಬೇಕಾಗಿದೆ. ಯುವ ಪ್ರತಿಭೆಗಳಿಗೆ ಪೋತ್ಸಾಹ ದೊರೆಯ ಬೇಕಾಗಿದೆ. ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರುತ್ತಿದ್ದಾರೆ. ಅವರಲ್ಲಿ ಪ್ರತಿಭೆ ಇದೆ ಜೊತೆಗೆ ಗಂಡು ಮಕ್ಕಳಿಗಿಂತಲೂ ಹೆಚ್ಚಿನ ಪ್ರಮಾಣಿತೆ , ಪ್ರಯತ್ನ ಶ್ರದ್ಧೆ ಕಂಡು ಬರುತ್ತಿದೆ. ಅವರಿಗೆ ಅವಕಾಶ ನೀಡಬೇಕಾಗಿದೆ, ಪೋತ್ಸಾಹ ನೀಡಬೇಕಾಗಿದೆ. ಆಧುನಿಕ ಶಿಕ್ಷಣ, ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನಮ್ಮ ದೇಶದ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಭಾರತ ವಿಶ್ವ ಕುಟುಂಬದ ಕಲ್ಪನೆಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿ ವಿವಿಧ ಭಾಷೆ, ಜಾತಿ,ಧರ್ಮದ ಜನರು ಬದುಕುತ್ತಿದ್ದಾರೆ. ಯೆನೆಪೊಯ ವಿಶ್ವವಿದ್ಯಾನಿಲಯದ ಮೂಲಕ ಸ್ಥಾಪನೆಯಾದ ರೊಬೋಟೆಕ್ ಶಸ್ತ್ರಚಿಕಿತ್ಸಾ ಕೇಂದ್ರಗಳು ವಿಶ್ವದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನದ ಕೇಂದ್ರ. ಇದರ ಪ್ರಯೋಜನ ಈ ರಾಜ್ಯದ ಜನತೆಗೆ ದೊರೆಯುತ್ತದೆ. ಅದಕ್ಕಾಗಿ ರಾಜ್ಯದ ಜನತೆಯ ಪರವಾಗಿ ಯೆನೆಪೊಯ ವಿಶ್ವವಿದ್ಯಾನಿಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ದೇಶದ ಜನರಲ್ಲದೆ ವಿಶ್ವದ ಜನರ ಒಳಿತಿಗಾಗಿ ನಾವು ನಮ್ಮ ಶಕ್ತಿ , ಸಂಪತ್ತು, ಜ್ಞಾನ, ತಂತ್ರಜ್ಞಾನವನ್ನು ಬಳಸಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಮ್ಯುಲೇಶನ್ ಕೇಂದ್ರ ದೇಶದ ಅತ್ಯಂತ ದೊಡ್ಡ ಕೇಂದ್ರವಾಗಿದೆ. ಈ ಕೇಂದ್ರದ ಮೂಲಕ ರೋಗಿಗಳಿಗೆ ಅತ್ಯಾಧುನಿಕ ರೀತಿಯಲ್ಲಿ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ರೊಬೋಟೆಕ್ ಶಸ್ತ್ರ ಚಿಕಿತ್ಸಾ ಕೇಂದ್ರ ಅತ್ಯಾಧುನಿಕ ಸೂಕ್ಷ್ಮ ನಿಖರ ಶಸ್ತ್ರ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಕೇಂದ್ರವಾಗಿದೆ. ಭಾರತದಲ್ಲಿ ಈ ವ್ಯವಸ್ಥೆ ಕೆಲವೇ ಕೆಲವು ಪ್ರತಿಷ್ಠಿತ ಆಸ್ಪತ್ರೆಗಳು ಮಾತ್ರ ಹೊಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ವತಿಯಿಂದ ರಾಜ್ಯಪಾಲರನ್ನು ಯೆನೆಪೊಯ ಅಬ್ದುಲ್ಲಾ ಕುಂಞಿ ಸ್ಮರಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ, ಐಎಇ ಮತ್ತು ವೈಎಂಕೆ ಫೌಂಡೇಶನ್ನಿನ ಅಧ್ಯಕ್ಷ ವೈ.ಮುಹಮ್ಮದ್ ಕುಂಞ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಎಂ.ವಿಜಯ ಕುಮಾರ್ ಸ್ವಾಗತಿಸಿ, ಕುಲಸಚಿವ ಡಾ.ಜಿ.ಶಿವಕುಮಾರ್ ಮೆನನ್ ವಂದಿಸಿದರು.