ಪಿಡಿಒಗಳು ಮಾದರಿ ಗ್ರಾ.ಪಂ ಮಾಡುವ ಗುರಿಯಾಗಿರಿಸಿ: ಕೋಟ ಶ್ರೀನಿವಾಸ್ ಪೂಜಾರಿ
ಪುತ್ತೂರು, ಜು.30: ಗ್ರಾ.ಪಂನಲ್ಲಿ ಮಾಡಿದಷ್ಟು ಮುಗಿಯದ ಕೆಲಸಗಳಿವೆ. ಕಳೆದ 20 ವರ್ಷಗಳಲ್ಲಿ ಗ್ರಾ.ಪಂ.ಗಳು ತುಂಬಾ ಅಭಿವೃದ್ಧಿ ಕಂಡಿವೆ. ತಂತ್ರಜ್ಞಾನಗಳ ಬಳಕೆಯಾಗಿದೆ. ಪಿಡಿಒಗಳು ತಮ್ಮ ಗ್ರಾಮ ಪಂಚಾಯತ್‌ಗಳನ್ನು ಮಾದರಿಯಾಗಿಸುವ ಗುರಿ ಹೊಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ತಾ.ಪಂ ಸಭಾಂಗಣದಲ್ಲಿ ಜು.30ರಂದು ನಡೆದ ತಾಲೂಕು ಗ್ರಾ.ಪಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಹೆಚ್ಚಿನ ಪಂಚಾಯತ್‌ಗಳಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ನಿಭಾಯಿಸಿಕೊಂಡು ಉತ್ತಮ ಆಡಳಿತ ತರುವಲ್ಲಿ ಪಿಡಿಒಗಳು ಯಶಸ್ವಿಯಾಗಬೇಕೆಂದು ಹೇಳಿದ ಅವರು ಸಮಸ್ಯೆಗಳ ಕುರಿತು ವಿಚಾರಿಸಿದರು.
ಗ್ರಾ.ಪಂಗಳಲ್ಲಿ ಸರಕಾರದ ಹೊಸ ಯೋಜನೆಗಳು ರೂಪುಗೊಂಡಿವೆ. ಇದರಿಂದ ಕೆಲಸ ಜಾಸ್ತಿ ಆಗಿದೆ. ಸಿಬ್ಬಂದಿಯ ಕೊರತೆಯನ್ನು ಪರಿಹರಿಸಬೇಕು. ಕಂಪ್ಯೂಟರ್ ಮತ್ತು ಸ್ಕ್ಯಾನರ್ ಖರೀದಿಗೆ ಅನುಮತಿ ನೀಡಬೇಕು ಮತ್ತು ಪಂಚತಂತ್ರ ಮತ್ತು ಇ-ತಂತ್ರಾಂಶದಲ್ಲಿನ ಸಾಪ್ಟ್‌ವೇರ್‌ನಲ್ಲಿರುವ ದೋಷಗಳ ಕುರಿತು ಪಿಡಿಒಗಳು ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಉತ್ತರಿಸಿದ ಕೋಟ ಶ್ರೀನಿವಾಸ್ ಪೂಜಾರಿ, ಹೊಸ ಕಂಪ್ಯೂಟರ್ ಮತ್ತು ಸ್ಕ್ಯಾನರ್ ಖರೀದಿ ಕುರಿತು ಪ್ರಸ್ತಾವನೆ ಮಾಡಿದ್ದೇನೆ. ಈ ನಡುವೆ ಪಂಚಾಯತ್ ಮಟ್ಟದಲ್ಲೇ ಖರೀದಿಗೂ ಅನುಮತಿ ನೀಡುವಂತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಒಎಫ್‌ಸಿ ಕೇಬಲ್ ಅಳವಡಿಸಿದರೂ ಇಂಟರ್‌ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಮತ್ತು ದೂರವಾಣಿ ಬಿಲ್ 1 ಸಾವಿರ ರೂ. ಪಾವತಿ ಮಾಡಲು ಅವಕಾಶವಿದೆ. ಇಂಟರ್‌ನೆಟ್ ಬಂದ ಬಳಿಕ ಬಿಲ್ ಮೊತ್ತ ಜಾಸ್ತಿಯಾಗಿದೆ ಎಂದು ಸಭೆಯಲ್ಲಿ ಪಿಡಿಒಗಳು ಪ್ರಸ್ತಾಪ ಮಾಡಿದರು. ಈ ಎಲ್ಲಾ ಸಮಸ್ಯೆಗಳ ಕುರಿತು ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷ ಮುಕುಂದ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಉಪಸ್ಥಿತರಿದ್ದರು.