ವಿದ್ಯಾರ್ಥಿಗಳು ಅಂಕಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಪರಿಸರದ ಕಡೆಗೂ ನೀಡಬೇಕು: ಕೃಷ್ಣ ಜೆ. ಪಾಲೆಮಾರ್

Update: 2016-07-30 13:02 GMT

ಮಂಗಳೂರು,ಜು.30: ವಿದ್ಯಾರ್ಥಿಗಳು ಅಂಕಗಳಿಗೆ ನೀಡುವ ಪ್ರಾಮುಖ್ಯವನ್ನು ಪ್ರಕೃತಿ, ಪರಿಸರದ ಕಡೆಗೆ ನೀಡಬೇಕು. ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಅಗತ್ಯತೆ ಇದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಿಂದ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ 2015-16 ನೆ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ 18 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಿಬ್ಬಂದಿಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ 100 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ ಹಾಗೂ ಇನ್ಸೂರೆನ್ಸ್‌ನಲ್ಲಿ ಹೆಚ್ಚಿನ ಸಾಧನೆಗೈದ ಸಿಬ್ಬಂದಿಗೆ ಸನ್ಮಾನವನ್ನು ನೆರವೇರಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇದೆ. ಆದರೂ ಪ್ರಕೃತಿಯನ್ನು ಉಳಿಸುವ ಇನ್ನಷ್ಟು ಕಾರ್ಯವನ್ನು ಮಾಡಬೇಕಾಗಿದೆ. ವಿದ್ಯಾರ್ಥಿಗಳು ಶಿಸ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ರಂಗದಲ್ಲಿರುವವರನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯವನ್ನು ಎಸ್‌ಡಿಸಿಸಿ ಬ್ಯಾಂಕ್ ಮತ್ತು ಎಂ.ಎನ್ . ರಾಜೇಂದ್ರಕುಮಾರ್ ಮಾಡುತ್ತಿದ್ದಾರೆ. ಇಂತಹ ಕಾರ್ಯ ಮಾಡುತ್ತಿರುವ ಪ್ರಥಮ ಬ್ಯಾಂಕ್ ಇದಾಗಿದ್ದು ಈ ಸೇವಾ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಡಾ.ಎಂ .ಎನ್. ರಾಜೇಂದ್ರ ಕುಮಾರ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಅವರಲ್ಲಿ ಇನ್ನು ಕಲಿಯುವ ಹಂಬಲ ಮೂಡಿಸಬೇಕು, ಅವರು ಇನ್ನಷ್ಟು ಸಾಧನೆಗೈಯ್ಯಬೇಕು ಎಂಬ ಉದ್ದೇಶದಿಂದ ಎಸ್‌ಡಿಸಿಸಿ ಬ್ಯಾಂಕ್‌ನಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಬ್ಯಾಂಕಿನಿಂದ ಪ್ರೋತ್ಸಾಹ ಪಡೆದ ವಿದ್ಯಾರ್ಥಿಗಳು ಮುಂದೆ ಬಡ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಮೂಲಕ ದೇಶಸೇವೆ ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ವಿನಯ ಕುಮಾರ್ ಸೂರಿಂಜೆ, ಭಾಸ್ಕರ್ ಎಸ್.ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ ಉಪಸ್ಥಿತರಿದ್ದರು.
ಕೆ.ಎಸ್.ದೇವರಾಜ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ನಾಯರ್ ಎಂ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News