ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಬೇಸರದ ನುಡಿ

Update: 2016-07-30 13:46 GMT

ಮಂಗಳೂರು, ಜು.30: ಸರಕಾರದ ಗುರಿ ಹಾಗೂ ಉದ್ದೇಶಗಳನ್ನು ಈಡೇರಿಸುವಲ್ಲಿ ಕೆಲವೊಂದು ಕಠಿಣ ನಿರ್ಧಾರಗಳನ್ನು ಜಿಲ್ಲಾಧಿಕಾರಿಯಾಗಿ ಕೈಗೊಳ್ಳುವ ಸನ್ನಿವೇಶ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗೊಂದು ಮರಳು ನೀತಿ ರೂಪಿಸುವಲ್ಲಿ ವಿಫಲವಾಗಿರುವ ಬಗ್ಗೆ ವಿಷಾದವಿದೆ ಎಂದು ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿರುವ, ದ.ಕ. ಜಿಲ್ಲೆಯ 126ನೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎ.ಬಿ. ಇಬ್ರಾಹೀಂರವರು ಇಂದು ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಪ್ರಭಾರ ಜಿಲ್ಲಾಧಿಕಾರಿ ಅಧಿಕಾರವನ್ನು ಹಸ್ತಾಂತರಿಸಿದ ಬಳಿಕ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಹೃದಯಸ್ಪರ್ಶಿ ಬೀಳ್ಕೊಡುಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ದ.ಕ. ಜಿಲ್ಲೆಗೆ ಮರಳು ನೀತಿ ರೂಪಿಸಲು ಸಾಕಷ್ಟು ಗೊಂದಲದಿಂದಾಗಿ ಸಾಧ್ಯವಾಗಿಲ್ಲ. ಇದರ ಜತೆಯಲ್ಲೇ ಅಧಿಕಾರಿಗಳ ಕೊರತೆಯೂ ಜಿಲ್ಲೆಗೆ ಅಭಿವೃದ್ಧಿಗೆ ಬಾಧಕವಾಗುತ್ತಿದೆ. ತಾಲೂಕುಗಳಲ್ಲಿ ತಹಶೀಲ್ದಾರರಿಲ್ಲದಿರುವುದು, ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ ಬದಲಾವಣೆಗೆ ಸಾಧ್ಯವಾಗಿಲ್ಲ. ಮಹಾನಗರ ಪಾಲಿಕೆಯ ಹಂಪನಕಟ್ಟೆ ಹಾಗೂ ಫಳ್ನೀರ್‌ನಂತಹ ಪ್ರಮುಖ ರಸ್ತೆಗಳಲ್ಲೇ ಫುಟ್‌ಪಾತ್ ಇಲ್ಲದಿರುವುದು ಬೇಸರದ ಸಂಗತಿ. ದ.ಕ. ಜಿಲ್ಲೆಗೊಂದು ರಂಗ ಮಂದಿರಕ್ಕಾಗಿ ಕಳೆದೆರಡು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಪಟ್ಟರೂ ಆ ಬಗ್ಗೆ ನೋವಿದೆ ಎಂದು ಅವರು ಹೇಳಿದರು.

ಜನರ ಆಶೋತ್ತರಗಳಿಗೆ ತಕ್ಕಂತೆ ಕಾನೂನು ಜಾರಿಗೊಳಿಸಿದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಆ ಕಾರ್ಯವನ್ನು ಮಾಧ್ಯಮದ ಸಹಕಾರದೊಂದಿಗೆ ಮಾಡುವ ಪ್ರಯತ್ನ ಮಾಡಿದ್ದೇನೆ. ಸರಕಾರದ ವಿವಿಧ ಸೌಲಭ್ಯಗಳು, ಕಾನೂನುಗಳು ಹಾಗೂ ಹಕ್ಕುಗಳ ಒಳ ತಿರುವುಗಳನ್ನು ಮಾಧ್ಯಮದ ಮೂಲಕ ನೀಡುವ ಕೆಲಸ ಮಾಡಿದ್ದು, ಈ ಸಂದರ್ಭ ಹಲವು ಇಲಾಖೆಗಳು, ಸಂಸ್ಥೆಗಳ ವೈರತ್ವವನ್ನೂ ಎದುರಿಸಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದ ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಕಾನೂನು ಜನಪರವಾಗಿರಬೇಕೆಂಬ ಆಶಯದೊಂದಿಗೆ ಕರ್ತವ್ಯ ನಿರ್ವಹಿಸಿರುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜತೆಗಿನ ಒಡನಾಟದ ಬಗ್ಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಬೆಳಗ್ಗೆ 9 ಗಂಟೆಯಿಂದ ರಾತ್ರಿ ಸುಮಾರು 10 ಗಂಟೆಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಏಕೈಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಎಂದು ಪ್ರಶಂಸಿಸಿದರು. 2ವರ್ಷ 7 ತಿಂಗಳ ಕಾಲ ದ.ಕ. ಜಿಲ್ಲೆಯಲ್ಲಿ ಜನ ಸಾಮಾನ್ಯರ ಮನಗೆದ್ದ ಅವರ ಆಡಳಿತ ವೈಖರಿ, ಕ್ರಿಯಾಶೀಲತೆ, ನಮ್ಮಂತಹ ಯುವ ಅಧಿಕಾರಿಗಳಿಗೆ ಸ್ಪೂರ್ತಿದಾಯಕ. 50ರ ಹರೆಯದಲ್ಲೂ 25ರ ಯುವ ಅಧಿಕಾರಿಯಂತೆ ಕರ್ತವ್ಯ ನಿರ್ವಹಿಸುವ ಮೂಲಕ ಹೃದಯವಂತಿಕೆ ಇರುವವನಿಂದ ಮಾನವೀಯತೆಯಿಂದ ಕೆಲಸ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದವರು ಹೇಳಿದರು.

ಜನಪ್ರಿಯ, ದಕ್ಷ ಆಡಳಿತಾಧಿಕಾರಿ ಹಾಗೂ ನಾಯಕತ್ವ ಗುಣದೊಂದಿಗೆ ಅಧಿಕಾರಿಗಳಿಗೆ ಉತ್ಸಾಹ ತುಂಬುವ ಮನೋಭಾವ ಎ.ಬಿ. ಇಬ್ರಾಹೀಂರವರದ್ದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಶ್ರೀವಿದ್ಯಾ ಹೇಳಿದರು.

ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸುವ ತುಡಿತ ಕಳೆದ ಕೆಲವು ದಿನಗಳಲ್ಲಿ ಅವರಲ್ಲಿ ಕಂಡಿದ್ದೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಅಭಿಪ್ರಾಯಿಸಿದರು.

ಪತ್ರಕರ್ತರ ಪರವಾಗಿ ಮಾತನಾಡಿದ ಆತ್ಮಭೂಷಣ್, ಕೆಲಸದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಮೂಲಕ ಸರ್ವಸ್ಪರ್ಶಿಯಾಗಿ ಓರ್ವ ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂರವರು ಕರ್ತವ್ಯ ನಿಭಾಯಿಸಿದ್ದಾರೆ ಎಂದರು.

ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರಿಗೆ ಜಿಲ್ಲಾಡಳಿತ ಪರವಾಗಿ ಮಂಗಳೂರು ದರ್ಶನ ಪುಸ್ತಕವನ್ನು ನೀಡಿ ಸನ್ಮಾನ ಮಾಡುವ ಮೂಲಕ ಬೀಳ್ಕೊಡಲಾಯಿತು.

ವೇದಿಕೆಯಲ್ಲಿ ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಪುತ್ತೂರು ಸಹಾಯಕ ಆಯುಕ್ತರಾದ ಡಾ. ರಾಜೇಂದ್ರ , ಉಪ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪ್ರಮೋದ್‌ರವರ ಭಾವಗೀತೆಯೊಂದಿಗೆ ಬೀಳ್ಕೊಡುಗೆ ಸಮಾರಂಭ ಆರಂಭಗೊಂಡಿತು. ಡಾ. ಅಶೋಕ್ ಸ್ವಾಗತಿಸಿದರು. ಡಾ. ರಾಜೇಂದ್ರ ವಂದಿಸಿದರು.

ಹೊಸತನಕ್ಕೆ ಪ್ರಯತ್ನ ಪಡುವ ಮನೋಭಾವ: ಚಂದ್ರಶೇಖರ್

ಅಧಿಕಾರಿಗಳು ಸಾಮಾನ್ಯವಾಗಿ ಏಳೆಂಟು ವರ್ಷಗಳ ಕರ್ತವ್ಯದ ಬಳಿಕ ತಮ್ಮ ಹುಮ್ಮಸ್ಸನ್ನು ಕಳೆದುಕೊಂಡು ನಿಂತ ನೀರಾಗುವುದು ಸಹಜ. ತನ್ನ ಮೇಲಿನಿಂದ ಬಂದ ಆದೇಶವನ್ನು ಪಾಲಿಸುವುದಕ್ಕೆ ಮಾತ್ರ ಸೀಮಿತಗೊಳ್ಳುವ ಅವಧಿಯಲ್ಲಿ ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂರವರು ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾ, ಬದಲಾವಣೆ, ಹೊಸತನಕ್ಕೆ ಪ್ರಯತ್ನ ಪಡುವ ಮನೋಭಾವವನ್ನು ನಮಗೆಲ್ಲಾ ಕಲಿಸಿಕೊಟ್ಟಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಚಂದ್ರಶೇಖರ್ ನುಡಿದರು.

ಮಂಗಳೂರಿನ ಚರಿತ್ರೆಯಲ್ಲಿ ಎ.ಬಿ. ಇಬ್ರಾಹೀಂ ಹೆಸರು ಶಾಶ್ವತ: ಅಭಯ

ಜನಸಾಮಾನ್ಯರ ಜತೆ ಬೆರೆಯುವ ಮೂಲಕ ಮಂಗಳೂರಿನ ಚರಿತ್ರೆಯಲ್ಲಿ ತಮ್ಮ ಹೆಸರು ಶಾಶ್ವತವಾಗಿ ಉಳಿಯುವಂತಹ ರೀತಿಯಲ್ಲಿ ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂರವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಮೂಡಬಿದ್ರೆ ಕ್ಷೇತ್ರದ ಶಾಸಕರವಾಗಿರುವ ಅಭಯಚಂದ್ರ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಗಮನದ ವೇಳೆಯಲ್ಲೂ 79 ಪೌರ ಕಾರ್ಮಿಕರ ನೇಮಕಾತಿ ಆದೇಶ

ನಿರ್ಗಮನದ ಕೊನೆಯ ಕ್ಷಣದಲ್ಲಿಯೂ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹೀಂರವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಿನಕೂಲಿ ನೌಕರರಾಗಿದ್ದ 79 ಮಂದಿ ಪೌರ ಕಾರ್ಮಿಕರ ನೇಮಕಾತಿ ಆದೇಶ ಮಾಡುವ ಮೂಲಕ ದಲಿತ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಪೌರ ಕಾರ್ಮಿಕರ ನೇಮಕಾತಿ ಆದೇಶವನ್ನು ಅವರು ಪ್ರಕಟಿಸಿದರು.

ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂರವರು ದಲಿತ ಪರವಾದ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದೀಗ ನಿರ್ಗಮನದ ವೇಳೆಯಲ್ಲೂ ಕಳೆದ ಹಲವಾರು ಸಮಯಗಳಿಂದ ದಲಿತ ಸಮುದಾಯಗಳ ಪ್ರಮುಖ ಬೇಡಿಕೆಯಾಗಿದ್ದ 120ಕ್ಕೂ ಅಧಿಕ ಪೌರ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿ ಎ.ಬಿ. ಇಬ್ರಾಹೀಂರವರು 79 ಮಂದಿಯ ನೇಮಕಾತಿ ಆದೇಶದ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಮುಲ್ಕಿಯ ಅಮೃತಾನಂದಮಯಿ ನಗರದಲ್ಲಿ ಸುಮಾರು 60 ಅರ್ಹ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಒದಗಿಸುವ ಕೆಲಸವನ್ನು ಅವರು ಕೆಲ ದಿನಗಳ ಹಿಂದಷ್ಟೇ ಮಾಡುವ ಮೂಲಕ ತಮ್ಮ ಜನಪರ ಕಾಳಜಿಯನ್ನು ತೋರಿದ್ದಾರೆ ಎಂದು ದಲಿತ ನಾಯಕ ವಿಶು ಕುಮಾರ್ ವಾರ್ತಾಭಾರತಿಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News