×
Ad

ಸುಳ್ಯ: ಗೋಮಾಳ ಜಾಗದಲ್ಲಿ ವಾಸಿಸುತ್ತಿರುವವರಿಗೆ 94ಸಿ ಹಕ್ಕುಪತ್ರ ನೀಡುವಂತೆ ಆಗ್ರಹ

Update: 2016-07-30 19:29 IST

ಸುಳ್ಯ, ಜು.30: ಗೋಮಾಳದ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ 94 ಸಿ ಯೋಜನೆಯಲ್ಲಿ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚಿಸಿದರೂ ತಹಶೀಲ್ದಾರ್ ಅವರ ಸೂಚನೆ ಪಾಲಿಸುತ್ತಿಲ್ಲ ಎಂದು ಆರೋಪಿಸಿ ದಲಿತ ಮುಖಂಡರು ತಹಶೀಲ್ದಾರರನ್ನು ತರಾಟೆಗೆತ್ತಿಕೊಂಡ ಘಟನೆ ಎಸ್ಸಿ -ಎಸ್ಟಿ ಕುಂದುಕೊರತೆ ಸಭೆಯಲ್ಲಿ ನಡೆದಿದೆ.

ತಹಶೀಲ್ದಾರ್ ಅನಂತ ಶಂಕರ್‌ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಯ್ಯ, ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ, ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣ ಭಟ್ ವೇದಿಕೆಯಲ್ಲಿದ್ದರು.

ಸಬೆಯಲ್ಲಿ ವಿಷಯ ಪ್ರಸ್ತಾಪಿಸಿದ ಆನಂದ ಬೆಳ್ಳಾರೆ ಮತ್ತು ಬಾಬು ಕೆ.ಎಂ., ಜಾಲ್ಸೂರು ಗ್ರಾಮದ ಕೋನಡ್ಕಪದವಿನಲ್ಲಿ ಹಲವು ವರ್ಷಗಳಿಂದ 37 ಕುಟುಂಬದವರು ಗೋಮಾಳದಲ್ಲಿ ಮನೆ ಕಟ್ಟಿ ಕುಳಿತಿದ್ದಾರೆ. 94 ಸಿ ಯೋಜನೆಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಗೋಮಾಳ ಜಾಗ ಆದ್ದರಿಂದ ಹಕ್ಕುಪತ್ರ ಕೊಡಲು ಬರುವುದಿಲ್ಲ ಎಂದು ತೋರಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಯವರ ಬಳಿಗೆ ನಿಯೋಗ ಹೋಗಿ ಈ ಕುರಿತು ಚರ್ಚಿಸಿದಾಗ ಗೋಮಾಳಕ್ಕೆ ಬದಲಿ ಜಾಗವನ್ನು ಗುರುತಿಸಿ ಈಗ ಇರುವ ಜಾಗವನ್ನು ಆ ಫಲಾನುಭವಿಗಳಿಗೆ ಕೊಡಬಹುದು. ಇದಕ್ಕೆ ಸೂಕ್ತ ಕ್ರಮ ಜರುಗಿಸುವಂತೆಯೂ, ಪ್ರಸ್ತಾವನೆಯನ್ನು ಕಳುಹಿಸಿ ಕೊಡುವಂತೆಯೂ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚಿಸಿದರೂ ಅವರು ಕ್ರಮಕೈಗೊಳ್ಳುತ್ತಿಲ್ಲ ಎಂದು ಹೇಳಿದರು.

ತಹಶೀಲ್ದಾರ್ ಅನಂತಶಂಕರ್ ಮಾತನಾಡಿ, ಅದು ಗೋಮಾಳದ ಜಾಗ ಆಗಿದೆ. ಇದನ್ನು ನೋಡುತ್ತೇವೆ ಎಂದು ಹೇಳಿದರು. ತಾಲೂಕಿನಲ್ಲಿ ಹಲವು ಕಡೆ ಗೋಮಾಳದ ಸ್ಥಳ ಇದೆ. ಕೆಲವರಿಗೆ ಗೋಮಾಳದಲ್ಲಿ ಹಕ್ಕುಪತ್ರ ನೀಡಿದ್ದೀರಿ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ಕಾನೂನು ಬೇಡ. ಸುಳ್ಯದಲ್ಲಿ ಕೆಲವು ಮೇಲ್ವರ್ಗದ ಸಂಘ ಸಂಸ್ಥೆಯವರಿಗೆ ಗೋಮಾಳವನ್ನು ಕೊಟ್ಟಿದ್ದೀರಿ. ಯಾರು ನಿಮಗೆ ಹಣ ಕೊಡುತ್ತಾರೋ ಅವರಿಗೆ ಕೊಡುತ್ತೀರಿ. ಡಿ.ಸಿ.ಯವರ ಸೂಚನೆಯನ್ನೇ ನೀವು ಪಾಲಿಸುತ್ತಿಲ್ಲ ಎಂದರೆ ಏನು ಅರ್ಥ? ಎಂದು ಬಾಬು ಕೆ.ಎಂ. ಹಾಗೂ ಆನಂದರು ಪ್ರಶ್ನಿಸಿದರು. ಅವರ ಜತೆಯಲ್ಲಿ ಸಂಜಯ ಪೈಚಾರು, ನಾರಾಯಣ ಜಟ್ಟಿಪಳ್ಳ, ಶಂಕರ ಪೆರಾಜೆ, ಅಚ್ಚುತ ಮಲ್ಕಜೆ ಮೊದಲಾದವರು ಧ್ವನಿಗೂಡಿಸಿ ಮಾತನಾಡಿದರು.

ನಾವು ಬಡವರು ಶ್ರೀಮಂತರು ಎಂದು ನೋಡಿಲ್ಲ. ಕಾನೂನು ಪ್ರಕಾರ ಕೆಲಸ ಆಗಿದೆ. ಈಗಾಗಲೇ 1,532 ಹಕ್ಕು ಪತ್ರ ನೀಡಿದ್ದೇವಲ್ಲ ಎಂದು ತಹಶೀಲ್ದಾರ್ ಹೇಳಿದರು. ಡಿಸಿ ಮನ್ನಾ ಜಮೀನನ್ನು ಹೀಗೆ ಮಾಡಿದ್ದೀರಿ. ಸರ್ವೇ ಕಾರ್ಯವೂ ನಡೆಸುತ್ತಿಲ್ಲ ಎಂದು ದಲಿತ ಮುಖಂಡರು ಹೇಳಿದರು. ಕೋನಡ್ಕ ಪದವಿನ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕೆಲಸ ಶೀಘ್ರದಲ್ಲೇ ಆಗಬೇಕು. ಇಲ್ಲವಾದರೆ ತಾಲೂಕು ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಆನಂದ ಬೆಳ್ಳಾರೆ ಹೇಳಿದರು. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕ್ರಿಯೆಗೆ 4 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಹಶೀಲ್ದಾರ್ ಅನಂತಶಂಕರ್ ಹೇಳಿದರು.

ಸುಳ್ಯ ನ.ಪಂ. ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿದ ನ.ಪಂ. ಸದಸ್ಯ ಗೋಕುಲ್‌ದಾಸ್‌ರ ಸದಸ್ಯತ್ವ ವಜಾಕ್ಕೆ ನ್ಯಾಯಾಲಯ ಸೂಚಿಸಿದರೂ ಕ್ರಮ ಜರುಗಿಸಿಲ್ಲ. ಹಿಂದಿನ ಸಭೆಯಲ್ಲಿಯೂ ನಾವು ಈ ಕುರಿತು ಪ್ರಸ್ತಾಪಿಸಿದ್ದೆವು ಎಂದು ಸಂಜಯ ಪೈಚಾರು ಹೇಳಿದರು. ಅವರು ಮನ್ನೆ ಜಾತಿ ಎಂದು ಉಲ್ಲೇಖಿಸಿದ್ದಾರೆ. ವಿ.ಎ.ಯವರು ಖಾಲಿ ಪತ್ರದಲ್ಲಿ ಮನ್ನೆ ಎಂದು ಬರೆದು ಸಹಿ ಹಾಕಿದ್ದಾರೆ. ಈ ಬಗ್ಗೆಯೂ ತನಿಖೆ ಯಾಗಬೇಕು. ಅಲ್ಲದೆ ನಮ್ಮಲ್ಲಿ ಆ ಹೆಸರಿನ ಜಾತಿಯಿಲ್ಲ. ಕೇರಳದಲ್ಲಿಯೂ ಈ ಜಾತಿಯ ಉಲ್ಲೇಖವಿಲ್ಲ. ಇಲ್ಲಿ ನೀವು ಕ್ರಮ ಕೈಗೊಳ್ಳದಿದ್ದರೆ ಮತ್ತೆ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.

ಹೊಸಗದ್ದೆಯಲ್ಲಿ ಬಾಬು ಕೊರಗ ಎಂಬವರ ಹೆಸರಿಗೆ ಆಗಿದ್ದ ಜಾಗದ ಆರ್‌ಟಿಸಿಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಮರುತನಿಖೆ ನಡೆಸುವಂತೆ ತಹಶೀಲ್ದಾರರಿಗೆ ಮನವಿ ಮಾಡಿಕೊಳ್ಳಲಾಯಿತು. ಗುತ್ತಿಗಾರು ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ ನಡೆದ ಸಂದರ್ಭದಲ್ಲಿ ಆ ಜಾಗದಲ್ಲಿರುವ ದಲಿತರನ್ನು ಎಬ್ಬಿಸಲಾಗುತ್ತದೆ ಎಂದು ಅಚ್ಚುತ ಮಲ್ಕಜೆ ಸಬೆಯ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News