×
Ad

ಸುಳ್ಯದ ತ್ಯಾಜ್ಯ ಅಮರಪಡ್ನೂರಿಗೆ ವಿಲೇವಾರಿ ಪ್ರಸ್ತಾಪ: ಶಾಸಕರ ಸ್ಪಷ್ಟನೆಗೆ ಆಗ್ರಹ

Update: 2016-07-30 19:50 IST

ಸುಳ್ಯ, ಜು.30: ಅಮರಮೂಡ್ನೂರು ಗ್ರಾಮದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇನ್ನೊಂದು ಕಲ್ಚರ್ಪೆಯನ್ನಾಗಿಸಲು ಬಿಡುವುದಿಲ್ಲ ಎಂದು ಅಮರಮೂಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಹಾಗೂ ಕಿಸಾನ್ ಕಾಂಗ್ರೆಸ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಅಶೋಕ್ ಚೂಂತಾರು, ಸುಳ್ಯದಲ್ಲಿ ನಡೆದ ಜನತಾ ದರ್ಶನದಲ್ಲಿ ನಗರ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಹಾಕಲು ಚೊಕ್ಕಾಡಿಯ ಅಕ್ಕೋಜಿಪಾಲ್ ಎಂಬಲ್ಲಿ ಸ್ಥಳ ಗುರುತಿಸಿದ್ದಾಗಿ ಹೇಳಿಕೆ ನೀಡಿದ್ದು, ಇಲ್ಲಿ ಕಸ ಹಾಕುವುದಕ್ಕೆ ಊರವರ ಆಕ್ಷೇಪವಿದೆ ಎಂದರು.

ಅಧಿಕಾರಿಗಳು ತಿಳಿಸಿದಂತೆ ಖಾಸಗಿಯವರ ಜಮೀನು ಎಂದು ತಿಳಿಸಿದ್ದು ಜಮೀನಿನ ಮಾಲಕರು ಕಂದಾಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಮಧ್ಯೆ ಕಂದಾಯ ಅಧಿಕಾರಿಗಳು ಶೇಣಿಯಲ್ಲಿ ಸರಕಾರಿ ಜಮೀನು ಸರ್ವೇ ನಡೆಸಿದ್ದು, ಇಲ್ಲಿ ಕಸ ಹಾಕುವ ಪ್ರಕ್ರಿಯೆ ನಡೆದರೂ ಅದಕ್ಕೂ ಗ್ರಾಮಸ್ಥರ ವಿರೋಧವಿದೆ ಎಂದರು.

ಡಂಪಿಂಗ್ ಯಾರ್ಡ್‌ಗೆ ಆದಷ್ಟು ಬೇಗ ಸ್ಥಳವನ್ನು ಗುರುತಿಸಿ ಅಲ್ಲಿ ಕಸ ಹಾಕುವ ವ್ಯವಸ್ಥೆ ಮಾಡಬೇಕು. ಎಲ್ಲವನ್ನೂ ಎಲ್ಲರೊಡನೆ ಕೇಳಿ ತೀರ್ಮಾನಿಸಲು ಆಗುವುದಿಲ್ಲ, ಅದನ್ನು ಇಲ್ಲಿ ಚರ್ಚಿಸುವುದು ಬೇಡ. ಕಚೇರಿಯಲ್ಲಿ ಮಾತನಾಡುವ ಎಂದು ಶಾಸಕರು ಕಂದಾಯ ಅದಾಲತ್‌ನಲ್ಲಿ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತು ಶಾಸಕರು ಸ್ಪಷ್ಟನೆ ನೀಡಬೇಕು. ಇಂತಹ ಸೂಕ್ಷ್ಮ ವಿಷಯಗಳ ಪಾರದರ್ಶಕವಾಗಿ ಮಾಡಬೇಕು ಎಂದವರು ಆಗ್ರಹಿಸಿದರು.

ಅಮರ ಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಇಟ್ಟಿಗುಂಡಿ, ಪುಷ್ಪಾವತಿ, ಮಾಜಿ ಸದಸ್ಯೆ ಕಮಲ ನೇಣಾರು, ನಾರಾಯಣ ನಾಯ್ಕ, ಪವನ್ ಮುಂಡ್ರಾಜೆ, ರವಿಕುಮಾರ್ ಅಕ್ಕೋಜಿಪಾಲ್, ನಿತಿನ್ ಕುಳ್ಳಾಜೆ, ಜಯರಾಮ ಬೊಳ್ಕಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News