ಯುದ್ಧ ಗೆಲ್ಲಲು ಕಠಿಣ ತರಬೇತಿ ಪಡೆಯುತ್ತಿರುವ ಚೀನಾ ಸೇನೆ

Update: 2016-07-30 15:26 GMT

ಬೀಜಿಂಗ್, ಜು. 30: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಚೀನಾ ಸೇನೆಯು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಮೂಲಭೂತ ಪರಿವರ್ತನೆಯಲ್ಲಿ ತೊಡಗಿದೆ. ಅದೇ ವೇಳೆ, ಯುದ್ಧಗಳನ್ನು ಜಯಿಸಲು ಕಠಿಣ ತರಬೇತಿ ಪಡೆಯುವಂತೆ ರವಿವಾರ 89ನೆ ವರ್ಷಕ್ಕೆ ಕಾಲಿಡುವ 23 ಲಕ್ಷ ಬಲದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒತ್ತಾಯಿಸಿದ್ದಾರೆ.
ಸಂಪನ್ಮೂಲ ಸಂಪದ್ಭರಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಈ ತಿಂಗಳ ಆರಂಭದಲ್ಲಿ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯೊಂದು ತೀರ್ಪು ನೀಡಿದ ಬಳಿಕ ಸಮುದ್ರದಲ್ಲಿ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿದೆ. ಒಂದು ವೇಳೆ ಯಾವುದೇ ಕ್ಷಣದಲ್ಲಿ ಯುದ್ಧ ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ಚೀನಾ ಸೇನೆ ತರಬೇತಿ ಪಡೆಯುತ್ತಿದೆ.
ಅದೂ ಅಲ್ಲದೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಮೇಲಿನಿಂದ ಕೆಳಗೆ ಅಧ್ಯಕ್ಷ ಜಿನ್‌ಪಿಂಗ್ ಸಮಗ್ರವಾಗಿ ಪುನರ್ರಚಿಸಿದ್ದಾರೆ.
‘‘ಸುಧಾರಣೆ ಎನ್ನುವುದು ಸಮಗ್ರ ಹಾಗೂ ಕ್ರಾಂತಿಕಾರಿ ಬದಲಾವಣೆ. ಚೀನಾದ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೆ ತಕ್ಕಂತೆ ಬಲಿಷ್ಠ ಸಶಸ್ತ್ರ ಪಡೆಗಳನ್ನು ನಿರ್ಮಿಸುವುದಕ್ಕಾಗಿ ಸುಧಾರಣಾ ಪ್ರಕ್ರಿಯೆಗೆ ತಡೆಯಾಗಬಹುದಾದ ಯಾವುದೇ ವಿಷಯಗಳು ಹಾಗೂ ನೀತಿಗಳನ್ನು ಸರಿಯಾಗಿ ನಿಭಾಯಿಸಬೇಕಾಗುತ್ತದೆ’’ ಎಂದು ಜಿನ್‌ಪಿಂಗ್ ಹೇಳಿದ್ದಾರೆ.
ಸೇನೆಯ ಮೇಲಿನ ತನ್ನ ಹಿಡಿತವನ್ನು ಬಲಪಡಿಸಿಕೊಂಡಿರುವ ಅವರು, ಇತ್ತೀಚಿನ ಸಮಯದ ಅತ್ಯಂತ ಬಲಿಷ್ಠ ಚೀನಿ ನಾಯಕನಾಗಿ ಹೊರಹೊಮ್ಮಿದ್ದಾರೆ.
ಚೀನಾ ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನೆಯನ್ನು ಹೊಂದಿದೆ.
ಇತರ ದೇಶಗಳ ಸೇನೆಗಳು ಆಯಾಯ ಸರಕಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸಿದರೆ, ಚೀನಾದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಅಡಿಯಲ್ಲಿ ಸೇನೆ ಕೆಲಸ ಮಾಡುತ್ತದೆ. ಚೀನಾದ ಸೇನೆಗೆ ಈಗ ಬೃಹತ್ 14,500 ಕೋಟಿ ಡಾಲರ್ ವಾರ್ಷಿಕ ಬಜೆಟ್ ನೀಡಲಾಗುತ್ತಿದೆ. ಬಜೆಟ್ ಗಾತ್ರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಂತರದ ಸ್ಥಾನದಲ್ಲಿ ಚೀನಾ ಇದೆ.
 2013ರಲ್ಲಿ ಅಧಿಕಾರಕ್ಕೆ ಏರಿದ ಜಿನ್‌ಪಿಂಗ್ ಸೇನೆಯ ಮೇಲೆ ಹೆಚ್ಚಿನ ಗಮನ ಹರಿಸಿದರು. ಪಕ್ಷದ ಅಡಿಯಲ್ಲಿ ಸೇನೆ ಇರಬೇಕು ಹಾಗೂ ಯುದ್ಧಗಳನ್ನು ಗೆಲ್ಲುವುದಕ್ಕಾಗಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎನ್ನುವ ಬಯಕೆಯನ್ನು ಅವರು ಹೊಂದಿದ್ದರು. ಭ್ರಷ್ಟಾಚಾರವನ್ನು ತೊಲಗಿಸಿ ವೃತ್ತಿಪರ ರೀತಿಯಲ್ಲಿ ಸೇನೆ ಕಾರ್ಯನಿರ್ವಹಿಸುವಂತೆ ಅವರು ಮಾಡಿದರು.
ಭ್ರಷ್ಟಾಚಾರ ಆರೋಪದಲ್ಲಿ, ಇಬ್ಬರು ನಿವೃತ್ತ ಸೇನಾ ಮುಖ್ಯಸ್ಥರು ಸೇರಿದಂತೆ 40ಕ್ಕೂ ಅಧಿಕ ಉನ್ನತ ಕಮಾಂಡರ್‌ಗಳು ವಿಚಾರಣೆ ಎದುರಿಸಿದರು. ಸೇನೆಯಲ್ಲಿ ಭ್ರಷ್ಟಾಚಾರ ತಾಂಡವವಾಡಿತ್ತು. ಭಾರೀ ಮೊತ್ತದ ಲಂಚ ಪಡೆದು ಜನರಲ್‌ಗಳು ಹುದ್ದೆಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News