×
Ad

ಪಡಿತರ ವ್ಯವಸ್ಥೆಯ ಬಿಪಿಎಲ್-ಎಪಿಎಲ್ ಮಾನದಂಡ ಬದಲಾವಣೆ: ಯು.ಟಿ.ಖಾದರ್

Update: 2016-07-30 21:29 IST

ಮಂಗಳೂರು, ಜು.30: ಪಡಿತರ ಚೀಟಿ ವಿತರಣೆಗೆ ಹೊಸ ಮಾನದಂಡ ರಚನೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಸಕ್ತ ಇರುವ ಪಡಿತರ ವ್ಯವಸ್ಥೆಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಎಂಬ ವರ್ಗೀಕರಣ ಮಾಡಲಾಗಿದೆ. ಆದರೂ ಈ ವಿತರಣೆಯ ವ್ಯವಸ್ಥೆಯಲ್ಲಿ ಸಾಕಷ್ಟು ಸಬ್ಸಿಡಿ ಹಣ ಸೋರಿಕೆಯಾಗುತ್ತಿದೆ. ಈ ಸೋರಿಕೆಯನ್ನು ತಡೆಯಲು ಪಡಿತರ ವ್ಯವಸ್ಥೆಯಲ್ಲಿ ಕೂಪನ್ ಪದ್ಧತಿಯನ್ನು ಜಾರಿಗೆ ತರಲಾಗುವುದು. ಪ್ರಸಕ್ತ ಬಿಪಿಎಲ್ ಪಡಿತರ ಚೀಟಿ ವಿತರಿಸಲು 14 ಮಾನದಂಡವನ್ನು ನಿಗದಿಪಡಿಸಲಾಗಿದೆ. ಇದರಿಂದ ದ್ವಿಚಕ್ರ ವಾಹನ ಹೊಂದಿದವರು, ಬಾಡಿಗೆ ವಾಹನ ಹೊಂದಿದವರು ಈ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮನೆಯ ವಿಸ್ತೀರ್ಣ, ವಿದ್ಯುತ್ ಬಳಸಿದ ಯೂನಿಟ್, ದ್ವಿಚಕ್ರ ವಾಹನ ಹೊಂದಿದ್ದರೂ ಸರಕಾರಿ ಅಧಿಕಾರಿಗಳನ್ನು ಹೊರತು ಪಡಿಸಿ ಆದ್ಯತಾ ವಲಯ, ಎರಡನೆ ಆದ್ಯತಾ ವಲಯದ ವರ್ಗ ಎಂದು ವಿಂಗಡಿಸಿ ಪಡಿತರ ಚೀಟಿಯನ್ನು ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿ ವಿತರಣೆಗೆ ಸಂಬಂಧಿಸಿದಂತೆ ಲಾಭಾಂಶವನ್ನು ಹೆಚ್ಚಿಗೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಗಳಿಂದ ಜನರಿಗೆ ಮೋಸ ಆಗದಂತೆ ಹಾಗೂ ನ್ಯಾಯಬೆಲೆ ಅಂಗಡಿಗಳು ನಷ್ಟಹೊಂದಂತೆ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿವಿಧ ಕಾಲಗಳಲ್ಲಿ ಜನರಿಗೆ ಅಗತ್ಯವಿರುವ ದವಸ ಧಾನ್ಯ, ಬೇಳೆ ಕಾಳುಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪಾರದರ್ಶಕ ವ್ಯವಸ್ಥೆಯನ್ನು ಪಡಿತರ ವ್ಯವಸ್ಥೆಯಲ್ಲಿ ಜಾರಿಗೊಳಿಸಲು ವಾರ್ಡ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ವರೆಗೆ ಜಾಗೃತ ಸಮಿತಿಯನ್ನು ರಚಿಸಲಾಗುವುದು. ಕೂಪನ್ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಎರಡು ಗ್ರಾಮ ಪಂಚಾಯತ್‌ಗಳಲ್ಲಿ ಕೂಪನ್ ವ್ಯವಸ್ಥೆಯನ್ನು (ಸೀಮೆ ಎಣ್ಣಿ ವಿತರಣೆಗೆ )ಪೈಲಟ್ ಯೋಜನೆಯ ಪ್ರಕಾರ ಜಾರಿ ಮಾಡಲಾಗಿದೆ. ಇದರಿಂದ ಅರ್ಹರಿಗೆ ಪಡಿತರ ಆಹಾರ ಸಾಮಗ್ರಿಗಳು ದೊರೆತಿದೆ. ಸೋರಿಕೆಯನ್ನು ತಡೆಯಲು ಸಾಧ್ಯವಾಗಿದೆ. ಇದೇ ರೀತಿ ಸಬ್ಸಿಡಿ ಸೋರಿಕೆಯನ್ನು ತಡೆಯಲು ಸಾಧ್ಯವಾದರೆ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಪಡಿಸಬಹುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News