ಅಕ್ರಮ ಮರಳುಗಾರಿಕೆಯಿಂದ ಕುಡಿಯುವ ನೀರಿಗೆ ಕುತ್ತು!
ಮಂಗಳೂರು, ಆ.1: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಇದೀಗ ಪ್ರಾಕೃತಿಕ ಸಂಪತ್ತಿನ ಲೂಟಿ ಮಾತ್ರವಲ್ಲದೆ, ಕುಡಿಯುವ ನೀರಿಗೆ ಆಪತ್ತು ಬಂದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹೊಸದಿಲ್ಲಿಯ ಎನ್‌ಜಿಟಿ (ಹಸಿರು ಪೀಠ)ಗೆ ಸಿದ್ಧಪಡಿಸಲಾಗಿರುವ ದೂರು ಅರ್ಜಿ ಆಗಸ್ಟ್ 17ರಂದು ಸಲ್ಲಿಕೆಯಾಗಲಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ ಶೆಟ್ಟಿ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಕಳೆದ 2 ವರ್ಷಗಳಿಂದ ಮಾಹಿತಿ ಹಕ್ಕಿನಡಿ ತಾವು ಪಡೆದಿರುವ 2800 ಪುಟಗಳ ದಾಖಲೆಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಗೆ ಸಂಬಂಧಿಸಿದ ಸಿಡಿ ಬಿಡುಗಡೆಗೊಂಡ ಬಳಿಕ ಅವರು ಮಾಹಿತಿ ನೀಡಿದರು.
ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಮಾಹಿತಿ ಹಕ್ಕಿನಡಿ ಪಡೆದಿರುವ ಮಾಹಿತಿಯಿಂದ ಸುಮಾರು 300 ಪುಟಗಳ ಮಾಹಿತಿಯನ್ನು ಕನ್ನಡ ಭಾಷೆಗೆ ತರ್ಜುಮೆಗೊಳಿಸಿ 48 ಅಪರಾಧ ದಾಖಲೆಗಳನ್ನು ಗುರುತಿಸಿ ಹೈಕೋರ್ಟ್‌ನ ನ್ಯಾಯಾಧೀಶರು, ರಾಜ್ಯಪಾಲರು, ಪ್ರಧಾನ ಮಂತ್ರಿ, ಪರಿಸರ ಸಚಿವರು, ರಾಜ್ಯದ ಬಂದರು ಮತ್ತು ಮೀನುಗಾರಿಕಾ ಸಚಿವರು, ಹಸಿರು ಪೀಠ ಸೇರಿದಂತೆ 20 ಪ್ರಮುಖ ಆಡಳಿತ ಯಂತ್ರಗಳಿಗೆ ಮನವಿಯನ್ನು ಸಲ್ಲಿಸಿರುವುದಾಗಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಸ್ಥಳೀಯರ ಬಳಕೆಗಾಗಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದ್ದರೂ ಕಳೆದ 15 ವರ್ಷಗಳಿಂದೀಚೆಗೆ ಇದೊಂದು ಅಕ್ರಮ ಹಣ ಗಳಿಸುವ ದಂಧೆಯಾಗಿ ಮುಂದುವರಿಯುತ್ತಿದೆ. ಇದಕ್ಕೆ 60ರಷ್ಟಿದ್ದ ಮರಳುಗಾರಿಕಾ ಪರವಾನಿಗೆ ಪಡೆದವರ ಸಂಖ್ಯೆ 472ಕ್ಕೆ ತಲುಪಿರುವುದು ಪ್ರಮುಖ ನಿದರ್ಶನ ಎಂದವರು ಹೇಳಿದರು.
ಕೇಂದ್ರ ಪರಿಸರ ಇಲಾಖೆಯ ಕಾಯಿದೆ ಹಾಗೂ ಸುತ್ತೋಲೆ ಪ್ರಕಾರ ಮರಳು ತೆಗೆಯುವುದು ಉದ್ಯಮವಲ್ಲ. ಒಳನಾಡು ಜಲಸಾರಿಗೆಯಲ್ಲಿ ಮೀನುಗಾರ ಸ್ಥಲೀಯ ದೋಣಿಗಳಿಗೆ ಮರಳಿನ ದಿಬ್ಬಗಳು ತಾಗದಂತೆ ಅವುಗಳನ್ನು ತೆರವುಗೊಳಿಸಲು ಕೇಂದ್ರ ಪರಿಸರ ಇಲಾಖೆ ನಿರ್ದೇಶಿಸಿದ ಕೆಲವೊಂದು ಅಧಿಕೃತ ಸಂಸ್ಥೆಯಿಂದ ಗುರುತಿಸಬೇಕಾಗಿದೆ. ಹಾಗೆ ಗುರುತಿಸಿದವರು ದೋಣಿಯ ಕುಲಕಸುಬನ್ನು ಮಾಡುವ ಸಾಂಪ್ರದಾಯಿಕ ಸ್ಥಳೀಯ ಜನರೇ ಈ ಕಾರ್ಯ ನಿರ್ವಹಿಸಬೇಕೆಂಬುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಕ್ಕಾಗಿ ಯಾವುದೇ ಯಂತ್ರವನ್ನು ಬಳಸುವಂತಿಲ್ಲ. ಮರದಿಂದ ಮಾಡಿದ ನಾಡದೋಣಿಯನ್ನು ಬಳಸಿಕೊಂಡು ಕೈಯ್ಯಲ್ಲಿ ದಿಬ್ಬದಿಂದ ಮರಲು ತೆಗೆದು ಬಕೆಟ್‌ಗಳಲ್ಲಿ ತುಂಬಿಸಿ ದೋಣಿಗೆ ಹಾಕಬೇಕೆಂಬುದಾಗಿ ಉಲ್ಲೇಖವಿದೆ. ಆದರೆ ಜಿಲ್ಲೆಯಲ್ಲಿ ಯಂತ್ರೋಪಕರಣಗಳನ್ನು ಬಳಸುವುದಲ್ಲದೆ, 18 ಅಡಿ ಕೋಲಿಗೆ ಜರಡಿಯನು ಕಟ್ಟಿ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ಸಮುದ್ರದ ಉಪ್ಪು ನೀರು ನೆಲದೊಳಗೆ ಸೇರಿ ಊರಿನ ಅಂತರ್ಜಲ, ಬಾವಿ, ಕೆರೆ ಮೊದಲಾದ ಕುಡಿಯುವ ನೀರಿನ ಮೂಲವು ಉಪ್ಪಾಗಿ ಗಡಸು ನೀರಾಗಿ ಪರಿರ್ವತನೆಯಾಗುತ್ತಿದೆ. ಇದಕ್ಕೆ ಉಭಯ ಜಿಲ್ಲೆಗಳ ಪಾವೂರು ಉಳಿಯ, ಕುಂದಾಪುರದ ಹೇರಿಕುದ್ರು ಮೊದಲಾದ ದ್ವೀಪ ಪ್ರದೇಶಗಳು ಸಾಕ್ಷಿಯಾಗಿವೆ ಎಂದವರು ವೀಡಿಯೋ ದಾಖಲೆಗಳ ಮೂಲಕ ಅಕ್ರಮ ಮರಳುಗಾರಿಕೆಯ ಕುರಿತಂತೆ ಮಾಹಿತಿ ನೀಡಿದರು.
ದೂರು ಅರ್ಜಿಯಲ್ಲಿ ತಿಳಿಸಲಾದ ಪ್ರಮುಖ ಅಂಶಗಳು
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
►ಮರಳು ತೆಗೆಯಲು ಗುತ್ತಿಗೆದಾರರು ಕಾರ್ಮಿಕರನ್ನು ಬಳಸುವಂತಿಲ್ಲ ಎಂಬ ನಿರ್ದೇಶನವಿದ್ದರೂ ಬಿಹಾರ, ಒರಿಸ್ಸಾ ಮೊದಲಾದ ರಾಜ್ಯಗಳ ಕೂಲಿ ಕಾರ್ಮಿಕರನ್ನು ಬಳಸಲಾಗುತ್ತಿದೆ. ಮಾತ್ರವಲ್ಲದೆ ಅವರಿಗೆ ನದಿ ದಂಡೆಗಳಲ್ಲಿ ಟೆಂಟ್‌ಗಳನ್ನು ಕಲ್ಪಿಸಿದ್ದರೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಶೌಚಾಲಯದ ವ್ಯವಸ್ಥೆ ಇಲ್ಲ. ಈ ಮೂಲಕ ನದಿ ದಂಡೆಗಳಲ್ಲಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
►ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮರಳನ್ನು ತೆಗೆಯಲು ಅನುಮತಿ ನೀಡಿರುವುದು, ಆದರೆ ರಾತ್ರಿ ಹೊತ್ತು ಮರಳುಗಾರಿಕೆ ನಡೆಯುತ್ತಿರುತ್ತದೆ.
►ಉಭಯ ಜಿಲ್ಲೆಗಳಲ್ಲಿ ಮರಳು ತೆಗೆಯಲು ನೀಡಲಾದ ಪ್ರದೇಶನ್ನು ಹೊರತುಪಡಿಸಿ ಹೊಳೆಯ ನಡುವಿನಲ್ಲೇ ಮರಳನ್ನು ತೆಗೆಯಲಾಗುತ್ತಿದೆ.
►ಮರಳನ್ನು ಸ್ಥಳೀಯ ಬಳಕೆಗೆ ಉಪಯೋಗ ಮಾಡುವಂತಿದ್ದರೂ ಘನ ವಾಹನಗಳಲ್ಲಿ ತುಂಬಿಸಿ ಹೊರ ರಾಜ್ಯ, ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ.
► ರಾಷ್ಟ್ರೀಯ ಹೆದ್ದಾರಿ ಕೆಳಗೆ ಅಕ್ರಮ ಮರಳುಗಾರಿಕೆಗೆ ಅವಕಾಶವಿಲ್ಲ್ಲದಿದ್ದರೂ, ಸೇತುವೆಗಳ ಎಡ ಬಲಗಳಲ್ಲಿ ನದಿಯ ಹರಿವಿನ ವಿರುದ್ಧ 500 ಮೀಟರ್ ಹಾಗೂ 250 ಮೀಟರ್ ನೇರಕ್ಕೆ ಮರಳುಗಾರಿಕೆ ನಿಷೇಧಿಸಲಾಗಿದ್ದರೂ ದ.ಕ. ಜಿಲ್ಲೆಯ ಮರವೂರು, ಜಪ್ಪಿನಮೊಗರು, ಹೇರಿಕುದ್ರು ಮೊದಲಾದ ಕಡೆ ಸೇತುವೆಯ ಆಸುಪಾಸಿನಲ್ಲೇ ಮರಳುಗಾರಿಕೆ ನಡೆಯುತ್ತಿದೆ.
► ಸಂರಕ್ಷಿತ ಕಾಂಡ್ಲ ವನಗಳು ಬೆಳೆದಿರುವಲ್ಲಿ ಗಣಿಗಾರಿಕೆಗೆ ಅವಕಾಶವೇ ಇಲ್ಲ. ಆದರೆ ಆ ಮರಗಳನ್ನು ಕಡಿದು ಗಣಿಗಾರಿಕೆ ಮಾಡಲಾಗುತ್ತಿದೆ.
► ಮಳೆಗಾಲದಲ್ಲಿ ಅಂದರೆ ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಮರಳು ತೆಗೆಯುವುದನ್ನು ಕೇಂದ್ರ ಪರಿಸರ ಇಲಾಖೆ ನಿಷೇಧಿಸಿ ಆದೇಶಿಸಿದ್ದರೂ ಕರಾವಳಿಯ ಜಿಲ್ಲಾಧಿಕಾರಿಗಳು ಹಾಗೂ ಕರಾವಳಿ ಜಿಲ್ಲಾ ವಲಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಈ ಆದೇಶವನ್ನು ಮೊಟಕುಗೊಳಿಸಿ ಕೇವಲ 45 ದಿನಗಳ ನಿಷೇಧ ಮಾಡಿ ಮರಳುಗಾರಿಕೆಗೆ ಅವಕಾಶ ನೀಡುತ್ತಿದ್ದಾರೆ.
► ಮರಳು ದಿಬ್ಬಗಳನ್ನು ವೈಜ್ಞಾನಿಕವಾಗಿ ಕೇಂದ್ರ ಪರಿಸರ ಇಲಾಖೆಯಿಂದ ಅನುಮೋದಿಸಲ್ಪಟ್ಟ ಸಂಸ್ಥೆಯಿಂದ ಗುರುತಿಸಿದ ಬಳಿಕವಷ್ಟೆ ಮರಳು ತೆಗೆಯಲು ಅನುಮತಿ ನೀಡಬೇಕು. ಆದರೆ ಉಭಯ ಜಿಲ್ಲೆಗಳಲ್ಲಿ 10 ವರ್ಷಗಳ ಮೊದಲು ಗುರುತಿಸಿದ ಮರಳು ದಿಬ್ಬಗಳ ಸರ್ವೆ ನಂಬರ್‌ಗಲಲ್ಲಿ ಒಂದೆಡರು ಅಂಕಿ ಅಂಶಗಳನ್ನು ಮಾತ್ರ ಬದಲಾವಣೆ ಮಾಡಿ ಸ್ಥಳ ಪರಿಶೀಲನೆ ಮಾಡದೆ ಕೇಂದ್ರ ಪರಿಸರ ಇಲಾಖಯ ಅನುಮೋದನೆಗೆ ಕಳುಹಿಸಿ ಕಾನೂನಿಗೆ ದ್ರೋಹ ಎಸಗಲಾಗುತ್ತಿದೆ.
ಗೋಷ್ಠಿಯಲ್ಲಿ ನಾರಾಯಣ ಕುಲಾಲ್, ಕಟೀಲು ದಿನೇಶ್ ಪೈ, ರತ್ನಾಕರ ಸುವರ್ಣ ಉಪಸ್ಥಿತರಿದ್ದರು.
ಪರಿಸರ ಹೋರಾಟಗಾರ ದಿನೇಶ್ ಹೊಳ್ಳರವರು ಮರಳಿನ ಡಬ್ಬಿಯಿಂದ ಸಿಡಿಯನ್ನು ಹೊರತೆಗೆಯುವ ಮೂಲಕ ವಿನೂತನವಾಗಿ ಅಕ್ರಮ ಮರಳುಗಾರಿಕೆಯ ಕುರಿತಂತೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಸಿದ್ಧಪಡಿಸಿರುವ ದಾಖಲೆಗಳ ಸಿಡಿಯನ್ನು ಬಿಡುಗಡೆಗೊಳಿಸಿದರು.