ಮಂಗಳೂರು: ಆ.3ರಂದು ಪ್ರಥಮ ವಿಮಾನ ಹಜ್ ಯಾತ್ರೆಗೆ ಚಾಲನೆ
ಮಂಗಳೂರು, ಆ.1: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಳ್ಳಲಿರುವ ಪ್ರಥಮ ವಿಮಾನ ಯಾನವು ಆ. 4ರಂದು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಮದೀನಾಕ್ಕೆ ಪ್ರಯಾಣ ಬೆಳೆಸಲಿದೆ.
ಈ ಸಂಬಂಧ ಪ್ರಥಮ ಹಜ್ ವಿಮಾನ ಯಾನದ ಉದ್ಘಾಟನಾ ಸಮಾರಂಭ ಆ. 3ರಂದು ಆಯೋಜಿಸಲಾಗಿದ್ದು, ಅಂದು ಮಧ್ಯಾಹ್ನ 3.30ಕ್ಕೆ ಬಜಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ. ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ ತಿಳಿಸಿದರು.
ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದು, ಉಡುಪಿಯ ಸಂಯುಕ್ತ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಆಶೀರ್ವಚನ ನೀಡಲಿದ್ದಾರೆ. ಸಮಾರಂಭವನ್ನು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಸಾಹೇಬ್ ಉದ್ಘಾಟಿಸುವರು.
ಸಮಾರಂಭದಲ್ಲಿ ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿಯು 2009ರಿಂದ ಕಾರ್ಯಾರಂಭಿಸಿದ್ದು, ಆ ವರ್ಷ ಹಳೆ ವಿಮಾನ ನಿಲ್ದಾಣದಿಂದ 675 ಮಂದಿ ಕ್ಯಾಲಿಕಟ್ ಮೂಲ ಮಕ್ಕಾಗೆ ತೆರಳಿದ್ದರು. 2010ರಲ್ಲಿ 867 ಮಂದಿ ಕ್ಯಾಲಿಕಟ್ ಮೂಲಕ ಪ್ರಯಾಣ ಬೆಳೆಸಿದ್ದರೆ, 2011ರಲ್ಲಿ 810 ಮಂದಿ ನೇರವಾಗಿ ಹೊಸ ವಿಮಾನ ನಿಲ್ದಾಣದಿಂದ ಮದೀನಾಕ್ಕೆ ಪ್ರಯಾಣಿಸಿದ್ದರು. 2012ರಲ್ಲಿ 1060 ಮಂದಿ ಹೊಸ ವಿಮಾನ ನಿಲ್ದಾಣದಿಂದ ನೇರವಾಗಿ ಮದೀನಾಕ್ಕೆ, 2013ರಲ್ಲಿ 966 ಮಂದಿ ಹೊಸ ವಿಮಾನ ನಿಲ್ದಾಣದಿಂದ ಗೋವಾ ಮೂಲಕ ಮದೀನಾಕ್ಕೆ ತೆರಳಿದ್ದರು. 2014ರಲ್ಲಿ 731 ಮಂದಿ ಹೊಸ ವಿಮಾನ ನಿಲ್ದಾಣದಿಂದ ಮುಂಬೈ ಮೂಲಕ ಮದೀನಾಕ್ಕೆ ಪ್ರಯಾಣಿಸಿದ್ದು, 2015ರಲ್ಲಿ 670 ಮಂದಿ ನೇರ ವಿಮಾನದ ಮೂಲಕ ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಂಡಿದ್ದರು ಎಂದು ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ತಿಳಿಸಿದರು.
ಗೋಷ್ಠಿಯಲ್ಲಿ ಹಜ್ ಅಧಿಕಾರಿ ಫೈರೋಝ್, ವಕ್ಫ್ ಅಧಿಕಾರಿ ಎಂ. ಅಬೂಬಕರ್, ಹನೀಫ್ ಹಾಜಿ ಬೋಳಾರ ಉಪಸ್ಥಿತರಿದ್ದರು.
ಮಂಗಳೂರಿನಿಂದ 628 ಹಜ್ ಯಾತ್ರಿಕರ ಪ್ರಯಾಣ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದ.ಕ. ಮತ್ತು ಉಡುಪಿ ಸೇರಿದಂತೆ ಐದು ಜಿಲ್ಲೆಗಳ ಒಟ್ಟು 628 ಹಜ್ ಯಾತ್ರಿಕರು ಆಗಸ್ಟ್ 4ರಿಂದ ಆ. 8ರವರೆಗೆ ಮದೀನಾಕ್ಕೆ ನೇರ ಪ್ರಯಾಣ ಬೆಳೆಸಲಿದ್ದಾರೆ ಎಂದು ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ವಿವರ ನೀಡಿದರು.