ಮುಂಡಗೋಡ: ಮನೆ ಬಾಗಿಲು ಮುರಿದು ನಗದು, ಆಭರಣ ದೋಚಿದ ಕಳ್ಳರು
ಮುಂಡಗೋಡ,ಆ.1: ಮನೆ ಬಾಗಿಲ ಕೀಲಿ ಮುರಿದು ಕಳ್ಳರು 20 ಸಾವಿರ ನಗದು ಹಾಗು ಸುಮಾರು 25 ಸಾವಿರ ಬೆಲೆ ಬಾಳುವ ಆಭರಣಗಳನ್ನು ಕದ್ದುಕೊಂಡು ಹೋದ ಘಟನೆ ಪಟ್ಟಣದ ನೆಹರು ನಗರ ರಾಯ್ಕರ ಚಾಳನಲ್ಲಿ ನಡೆದಿದೆ
ಬಿಎಸ್‌ಎನ್‌ಎಲ್ ನೌಕರ ಮುತ್ತಪ್ಪ ರಾಮಚಂದ್ರ ಮಹಳಾಪುರ ಎಂಬುವರ ಮನೆ ಕಳುವಾಗಿದ್ದು ಶನಿವಾರ ರಾತ್ರಿ ಡ್ಯೂಟಿಗೆ ಹೋಗಿದ್ದ ಇವರು ರವಿವಾರ ಬೆಳಗ್ಗೆ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಮಳಾಪುರ ಧರ್ಮಪತ್ನಿ ಹಾವೇರಿ ಜಿಲ್ಲೆಯಲ್ಲಿ ಸರಕಾರಿ ನೌಕರರಾದ ಕಾರಣ ಅವರು ಅಲ್ಲೆ ಇರುವುದರಿಂದ ಮನೆಗೆ ಬೀಗ ಹಾಕಿ ನೈಟ್ ಡ್ಯೂಟಿಗೆ ಹೋದ ಸಂದರ್ಭದಲ್ಲಿ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ತಮ್ಮ ಕೈ ಚಳಕ ತೋರಿಸಿದ್ದಾರೆ.
ಕಳ್ಳರ ಸುಳಿವು ಪಡೆದುಕೊಳ್ಳಲು ಪೊಲೀಸ್ ಶ್ವಾನದಳ ಕರೆಸಲಾಗಿತ್ತು. ಘಟನಾ ಸ್ಥಳಕ್ಕೆ ಯಲ್ಲಾಪೂರ ಪಿಆಯ್ ಬಿರಾದರ ಮುಂಡಗೋಡ ಪಿಎಸ್‌ಆಯ್ ಲಕ್ಕಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಸಂಖ್ಯಾ ಬಲ ಕಡಿಮೆ ಇರುವುದರಿಂದ ಇಂಥಹ ಘಟನೆಗಳು ಮರುಕಳುಸುತ್ತಿವೆ ಎಂದು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.