ಭಟ್ಕಳ: ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿಯಿಂದ ಉಚಿತ ಆರೋಗ್ಯ ಶಿಬಿರ
ಭಟ್ಕಳ,ಆ.1: ಜನತೆಗೆ ಆರೋಗ್ಯ ಭಾಗ್ಯ ಕಲ್ಪಿಸುವ ದೃಷ್ಟಿಯಿಂದ ಪ್ರತಿ ವರ್ಷ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸುತ್ತಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಶ್ರೀದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿ ಅಳ್ವೇಕೋಡಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದರು.
ಅವರು ಆಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್, ಶ್ರೀ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಅತ್ತಾವರ ಇವರ ಸಹಯೋಗದೊಂದಿಗೆ ಎರ್ಪಡಿಸಲಾದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶ್ರೀ ದೇವಸ್ಥಾನದ ವತಿಯಿಂದ ಜನತೆಗೆ ಅನೇಕ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಅವುಗಳನ್ನು ಅನ್ನದಾನ, ವಿದ್ಯಾದಾನ ಸೇರಿದೆ. ಮುಂದಿನ ದಿನಗಳಲ್ಲಿ ಜನತೆಗೆ ಅನುಕೂಲವಾಗುವಂತೆ ಆರೋಗ್ಯದ ಕುರಿತು ಚಿಂತಿಸಲಾಗಿದ್ದು ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಒಂದು ಆಸ್ಪತ್ರೆಯನ್ನು ತೆರೆಯುವ ಇಚ್ಚೆಯನ್ನು ಹೊಂದಲಾಗಿದೆ. ಜನರ ಸಹಕಾರದಿಂದ ಪ್ರತಿಯೊಂದನ್ನು ಕೂಡಾ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲ ಜನತೆ ಪಡೆಯುವಂತಾಗಲಿ ಎಂದೂ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಸಿ. ಮಣಿಪಾಲದ ದಂತ ವೈದ್ಯ ಡಾ. ಆಲ್ಬರ್ಟ ಮಾತನಾಡಿ ಇಲ್ಲಿ ವಿವಿಧ ತಜ್ಞ ವೈದ್ಯರು ಹಾಜರಿದ್ದು ತಪಾಸಣೆಯನ್ನು ಮಾಡಲಾಗುವುದು ಹಾಗೂ ಉಚಿತ ಸಲಹೆಯನ್ನು ನೀಡಲಾಗುವುದು. ಇಲ್ಲಿಯೇ ಮಾಡಲಾಗುವ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು, ದಂತ ವೈದ್ಯರ ತಂಡ ತಪಾಸಣೆಯನ್ನು ಮಾಡಿ ಚಿಕಿತ್ಸೆ ನೀಡುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಶಿಬಿರದಲ್ಲಿ ಭಾಗವಹಿಸಿರುವವರಿಗೆ ವಿಶೇಷ ರಿಯಾಯಿತಿಯಲ್ಲಿ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿ ಹನುಮಂತ ನಾಯ್ಕ, ತಿಮ್ಮಪ್ಪ ಹೊನ್ನಿಮನೆ, ಅರವಿಂದ ಪೈ, ತಜ್ಞ ವೈದ್ಯರಾದ ಡಾ. ದೀಪಕ್, ಡಾ. ಆನಂದ್ ಮುಂತಾದವರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನರಲ್ ಮೆಡಿಸಿನ್, ಎಲುಬು ಮತ್ತು ಕೀಲು ತಜ್ಞರು, ಹೃದಯ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ದಂತ ವೈದ್ಯರು ಭಾಗವಹಿಸಿದ್ದರು ನೂರಾರು ಜನರು ಪ್ರಯೋಜನ ಪಡೆದರು.
ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮೊಗೇರ ನಿರೂಪಿಸಿದರು.