ಗ್ರಾಹಕರಿಂದ ಹೆಚ್ಚುವರಿ ವಿದ್ಯುತ್ ಡೆಪಾಸಿಟ್ ವಸೂಲಿ: ಮೆಸ್ಕಾಂ ಕಚೇರಿಗೆ ಮುತ್ತಿಗೆ
ಉಳ್ಳಾಲ,ಆ.1: ಸಿಪಿಐಎಂ ಉಳ್ಳಾಲ ವಲಯ ಸಮಿತಿಯು ಗ್ರಾಹಕರಿಂದ ಹೆಚ್ಚುವರಿ ವಿದ್ಯುತ್ ಡೆಪಾಸಿಟ್ ವಸೂಲಿ ಮತ್ತು ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿ ಸೋಮವಾರದಂದು ತೊಕ್ಕೊಟ್ಟಿನ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಸಿಪಿಐಎಂ ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ವಿದ್ಯುತ್ ಸಂಪರ್ಕ ಪಡೆಯುವ ಸಂಧರ್ಭದಲ್ಲೇ ಗ್ರಾಹಕರು ಬೇಕಾದಷ್ಟು ಪ್ರಮಾಣದ ಮೊತ್ತವನ್ನು ಮೆಸ್ಕಾಂಗೆ ಡೆಪಾಸಿಟ್ ಆಗಿ ಪಾವತಿಸಿದ್ದರೂ ಕೂಡಾ ಮತ್ತೆ ಮತ್ತೆ ಮೆಸ್ಕಾಂನವರು ಡೆಪಾಸಿಟ್ ಹಣವನ್ನು ಸುಳಿಗೆ ಮಾಡುತ್ತಿದ್ದು, ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ವಿದ್ಯುತ್ ಕಂಬದಿಂದಲೇ ಸಂಪರ್ಕ ಕಡಿತಗೊಳಿಸಿ ಅಮಾನವೀಯತೆ ಪ್ರದರ್ಶಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರುಷ ಸಲ್ಲುತ್ತಿದ್ದರೂ ಸಹ ಈಗಲೂ ಹೆದ್ದಾರಿಗಳು, ಬೀದಿಗಳು ವಿದ್ಯುತನ್ನೇ ಕಾಣದಂತಾಗಿದೆ. ಮುಂದಿನ ದಿವಸಗಳಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ 2008 ರ ರೀತಿಯಲ್ಲಿ ಮೆಸ್ಕಾಂ ವಿರುದ್ಧ ಉಗ್ರವಾಗಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸಿಪಿಐಎಂ ಉಳ್ಳಾಲ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ ಸಿಪಿಐಎಂ ಇದುವರೆಗೂ ಪ್ರಚಾರಕ್ಕೆ ಬಯಸದೆ, ನಿಜವಾದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ. ಈ ಹಿಂದೆಯೂ ಇದೇ ರೀತಿಯ ಡೆಪಾಸಿಟ್ ವಸೂಲಿಯ ಸಮಸ್ಯೆ ಬಂದಾಗ ಕೆಂಪು ಬಾವುಟದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆದಿದ್ದು, ಆ ಸಂಧರ್ಭ ಮೆಸ್ಕಾಂ ಅಧಿಕಾರಿಗಳೇ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದರು. ಈವಾಗಲೂ ಸಮಯ ಮೀರಿಲ್ಲ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಡೆಪಾಸಿಟ್ ವಸೂಲಿಯನ್ನು ನಿಲ್ಲಿಸದಿದ್ದಲ್ಲಿ ಕೆಂಪು ಬಾವುಟಗಳು ಮತ್ತೊಮ್ಮೆ ಉಗ್ರರಾಗುವ ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರು ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ದಯಾನಂದ್ ಅವರಿಗೆ ಮೂರು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಸಿಪಿಐಎಂ ಮುಖಂಡರಾದ ಜಯಂತ್ ನಾಯ್ಕ,ಪದ್ಮಾವತಿ ಶೆಟ್ಟಿ,ನಾರಾಯಣ ತಲಪಾಡಿ,ಬಾಬು ಪಿಲಾರು,ಅರುಣ್ ಕುಮಾರ್ ತೊಕ್ಕೊಟ್ಟು,ಜಯಂತ್ ಅಂಬ್ಲಮೊಗರು,ವಿಲಾಸಿನಿ ಬಬ್ಬುಕಟ್ಟೆ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.