ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ನ್ಯಾಷನಲ್ ಮಿಷನ್ ಲೋಕಾರ್ಪಣೆ
ಮಂಗಳೂರು, ಆ.1: ಪಟ್ಟಿಕ್ಕಾಡ್‌ನ ಜಾಮಿಅ ನೂರಿಯ್ಯಾ ಅರೆಬಿಕ್ ಕಾಲೇಜು 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಹಾಗೂ ಪಾಣಕ್ಕಾಡ್ ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್‌ರ 7ನೆ ಅನುಸ್ಮರಣೆಯ ಅಂಗವಾಗಿ ಅವರ ಹೆಸರಿನಲ್ಲಿ ಆರಂಭಿಸಿರುವ ‘ನ್ಯಾಷನಲ್ ಮಿಷನ್’ಗೆ ಸೋಮವಾರ ಚಾಲನೆ ದೊರೆಯಿತು.
ನಗರದ ಪುರಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ನ್ಯಾಷನಲ್ ಮಿಷನ್’ಗೆ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಮಂದಹಾಸದಿಂದ ಜಗತ್ತು ಗೆದ್ದ ಸರ್ವರ ನಾಯಕನಾಗಿದ್ದರು. ಪಂಚಾಯತ್ ಸದಸ್ಯ ಕೂಡ ಆಗಿರದ ಅವರನ್ನು ದೇಶವೇ ಗೌರವಿಸಿದ್ದು ಅವರ ನಾಯಕತ್ವದ ಪ್ರತಿಫಲನದಿಂದಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಸ್ತದ ಪ್ರ.ಕಾರ್ಯದರ್ಶಿ ಶೈಖುಲ್ ಜಾಮಿಃ ಆಲಿಕುಟ್ಟಿ ಮುಸ್ಲಿಯಾರ್, ‘ನ್ಯಾಶನಲ್ ಮಿಷನ್’ನೊಂದಿಗೆ ಸರ್ವ ಮುಸ್ಲಿಮರೂ ಕೈಜೋಡಿಸುವಂತೆ ಕರೆ ನೀಡಿದರು.
ಮುಖ್ಯಭಾಷಣ ಮಾಡಿದ ಕೇರಳದ ಮಾಜಿ ಸಚಿವ ಪಿ.ಕೆ.ಕುಂಞಾಲಿ ಕುಟ್ಟಿ, ಇಸ್ಲಾಮ್ ಧರ್ಮದ ನೈಜ ಅರಿವು ಜಗತ್ತಿನೆಲೆಡೆ ತಲುಪಿಸಬೇಕಾದದ್ದು ಪ್ರಸಕ್ತ ಅನಿವಾರ್ಯವಾಗಿದೆ ಎಂದರು.
ಅನುಸ್ಮರಣಾ ಭಾಷಣ ಮಾಡಿದ ಶಾಸಕ ಅಬ್ದುಸ್ಸಮದ್ ಸಮದಾನಿಯವರು ಮುಹಮ್ಮದಲಿ ತಂಙಳರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಪಾಣಕ್ಕಾಡ್ ಸಯ್ಯದ್ ಬಶೀರಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಅಬ್ಬಾಸಲಿ ಶಿಹಾಬ್ ತಂಙಳ್ , ಸಮಸ್ತದ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಝೈನುಲ್ ಆಬಿದೀನ್ ತಂಙಳ್ ಅಡ್ಯಾರ್-ಕಣ್ಣೂರು, ಮುಸ್ತಫಾ ಅಶ್ರಫಿ ಕಕ್ಕುಪಡಿ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ಮಂಜೇಶ್ವರ ಶಾಸಕ ಅಬ್ದುರ್ರಝಾಕ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕ್ಕುನ್ನು ಮೊದಲಾದವರು ಉಪಸ್ಥಿತರಿದ್ದರು.
*ಅಧ್ಯಯನ ಶಿಬಿರ: ಬೆಳಗ್ಗೆ ‘ಸಮಕಾಲೀನ ಸಮಸ್ಯೆಗಳು ಮತ್ತು ಮುಸ್ಲಿಮರ ನಿಲುವು’ ಎಂಬ ವಿಷಯದಲ್ಲಿ ಅಧ್ಯಯನ ಶಿಬಿರ ನಡೆಯಿತು. ಅಬ್ಬಾಸ್ ಅಲಿ ಶಿಹಾಬ್ ತಂಙಳ್‌ಅಧ್ಯಕ್ಷತೆ ವಹಿಸಿದ್ದರು.
ಸಂಸದ ಇ.ಟಿ.ಮುಹಮ್ಮದ್ ಬಶೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಹಮ್ಮದ್ ಫೈಝಿ ಓಣಂಪಳ್ಳಿ, ಶಾಸಕರಾದ ಕೆ.ಎಂ.ಶಾಜಿ ಹಾಗೂ ಶಂಸುದ್ದೀನ್‌ಮಣ್ಣಾರ್ಕಾಡ್ ವಿಷಯ ಮಂಡಿಸಿ ಮಾತನಾಡಿದರು. ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಸ್ವಾಗತಿಸಿದರು.
*ರಾಕೇಶ್ ನಿಧನಕ್ಕೆ ಸಂತಾಪ: ಉದ್ಘಾಟನಾ ಭಾಷಣದ ಆರಂಭದಲ್ಲಿ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್‌ರವರು ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ರಾಕೇಶ್ ಸಿದ್ದರಾಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದರು.