×
Ad

ಭಟ್ಕಳ:'ಲೈಫ್ ಲೈನ್‌ ಎಕ್ಸ್ ಪ್ರೆಸ್‌' ಆರೋಗ್ಯ ರೈಲಿಗೆ ಆದ್ದೂರಿ ಸ್ವಾಗತ - ಜಿಲ್ಲಾಧಿಕಾರಿಯಿಂದ ಆರೋಗ್ಯ ಸೇವೆಗೆ ಚಾಲನೆ

Update: 2016-08-01 18:49 IST

ಭಟ್ಕಳ,ಆ.1: ಉತ್ತರಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಭಾಗ್ಯ ಕರುಣಿಸಲು ಸಂಚಾರಿ ರೈಲ್ವೇ ಆಸ್ಪತ್ರೆ "ಲೈಫ್ ಲೈನ್‌ ಎಕ್ಸಪ್ರೆಸ್" ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಆರೋಗ್ಯ ಸೇವೆ ಆರಂಭಿಸಿದ್ದು ಉತ್ತರ ಕನ್ನಡ ಜಿಲ್ಲಾಧಿಕಾರಿ ನಕುಲ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಲೈಫ್ ಲೈನ್‌ ಎಕ್ಸ್‌ಪ್ರಸ್‌ ರೈಲಿನಲ್ಲಿ ಸೇವೆಯನ್ನು ಪಡೆಯಲು ಯಾವುದೇ ನಿರ್ಬಂಧವಿಲ್ಲ, ಹಾಗೂ ಸೀಮಾ ರೇಖೆಯೂಇಲ್ಲ, ಎಲ್ಲಿಯವರೂ ಕೂಡಾ ಬಂದು ಆರೋಗ್ಯ ಸೇವೆಯನ್ನು ಪಡೆಯಬಹುದು ಎಂದರು.ಸೀಳುತುಟಿಯವರು ಮತ್ತು ಮೂರ್ಚೆ ರೋಗದವರಿಗೆ ಇದೊಂದು ಆಶಾದಾಯಕ ಆಸ್ಪತ್ರೆಯಾಗಿದೆ.ಇಲ್ಲಿಗೆ ಮುಂಬೈ, ದೆಹಲಿಯಲ್ಲಿನ ಹೆಸರಾಂತ ಆಸ್ಪತ್ರೆಯ ವೈದ್ಯರು ಆಗಮಿಸುತ್ತಿದ್ದು ಅವರ ಸೇವೆ ದೊರೆಯುವುದೇ ಅಪರೂಪ. ಖ್ಯಾತ ವೈದ್ಯರು ಇಲ್ಲಿಗೆ ಆಗಮಿಸುತ್ತಿರುವುದರಿಂದ ಇಲ್ಲಿನ ವೈದ್ಯರಿಗೆ ಒಂದು ದಿನದ ಅಧ್ಯಯನ ಶಿಬಿರವನ್ನು ಸಹ ಆಯೋಜಿಸಲಾಗಿದೆ ಎಂದರು.

ವಿಶ್ವದಲ್ಲಿಯೇ ರೈಲ್ವೇ ಹಳಿಯ ಮೇಲೆ ಆಸ್ಪತ್ರೆಯನ್ನು ಆರಂಭಿಸಿದ ಹೆಮ್ಮೆ ನಮ್ಮ ದೇಶಕ್ಕಿದ್ದು ನಂತರ ಇದನ್ನು ಚೀನಾದಲ್ಲಿ ದಕ್ಷಿಣಆಫ್ರಿಕಾದಲ್ಲಿ ಆರಂಭಿಸಲಾಗಿದೆ.ಬಂಗ್ಲಾದೇಶದಲ್ಲಿ ಬೋಟ್‌ನಲ್ಲಿ ಆಸ್ಪತ್ರೆಯನ್ನುಆರಂಭಿಸಲಾಗಿದೆ ಎಂದೂ ಮಾಹಿತಿ ನೀಡಿದರು.

ಲೈಫ್‌ಲೈನ್‌ ಎಕ್ಸ್ ಪ್ರೆಸ್‌ನ ಉಸ್ತುವಾರಿ ಡಾ.ರಜನೀಶ್ ಮಾತನಾಡಿ ಕಳೆದ 25 ವರ್ಷಗಳ ಇತಿಹಾಸವಿರುವ ನಮ್ಮ ಈ ಆಸ್ಪತ್ರೆ ಇಲ್ಲಿಯ ತನಕ 10 ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ನೀಡಿದ್ದು 1 ಲಕ್ಷಕ್ಕೂ ಹೆಚ್ಚು ಜನರಿಗೆ ಆಪರೇಶನ್ ಮೂಲಕ ಗುಣಪಡಿಸಿದೆ. 1991ರಲ್ಲಿ ಆರಂಭವಾದ ಆರೋಗ್ಯ ಸೇವೆ ಉತ್ತರ ಕನ್ನಡಕ್ಕೆ ಲಭ್ಯವಾದುದರ ಹಿಂದೆ ಸ್ಥಳೀಯರಾದ ಐ.ಎಫ್.ಎಸ್. ಅಧಿಕಾರಿ ದಾಮೋದರ ಅವರ ಶ್ರಮ ಇದೆ ಎಂದರು.

ಕಣ್ಣು, ಕಿವಿ, ಮೂಗು, ಗಂಟಲು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಲಭ್ಯವಿದ್ದು ಉಚಿತವಾಗಿ ಕನ್ನಡಕ, ಕಿವಿ ಕೇಳುವುದಿಲ್ಲವಾದರೆ ಶ್ರವಣ ಸಾಧನ ಕೂಡಾ ಒದಗಿಸಲಾಗುವುದು.ಜನ್ಮದಿಂದ ಕಣ್ಣಿನ ತೊಂದರೆ ಇದ್ದರೂ ಕೂಡಾ ನುರಿತ ವೈದ್ಯರು ಲಭ್ಯರಿರುತ್ತಾರೆ ಎಂದರು.

ಗೋವಾದಡಿ.ಎಫ್.ಓ.ದಾಮೋದರ ನಾಯ್ಕ ಮಾತನಾಡಿಇಂತಹ ಸುಸಜ್ಜಿತಆಸ್ಪತ್ರೆಯು ನಮ್ಮಲ್ಲಿಗೆ ಆಗಮಿಸಿದ್ದು ಅತ್ಯಂತ ಸಂತಸತಂದಿದೆ.ಉತ್ತರಕನ್ನಡ,ಸಾಗರ-ಶಿವಮೊಗ್ಗ, ಉಡುಪಿ ಜಿಲ್ಲೆಯಜನತೆಗೆ ಹತ್ತಿರವಾಗುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.

ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಈ ಆಸ್ಪತ್ರೆಯಲ್ಲಿದೊರೆಯುವ ಆರೋಗ್ಯ ಸೇವೆಯು ಅತ್ಯುತ್ತಮ ಸೇವೆಯಾಗಿದ್ದು ನುರಿತ ವೈದ್ಯರು ಆಗಮಿಸುತ್ತಾರೆ.ಸಾರ್ವಜನಿಕರು ಅಗತ್ಯವಿದ್ದವರು ಆರೋಗ್ಯ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಕೊಂಕಣ ರೈಲ್ವೇ ಕಾರವಾರದ ಪ್ರಾದೇಶಿ ಅಧಿಕಾರಿ ಸಲೀಮ್, ಪ್ರಭಾರಿ ಸಹಾಯಕ ಆಯುಕ್ತ ರಮೇಶ ಮುಂತಾದವರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದು ಮಾಜಿ ಶಾಸಕ ಜೆ.ಡಿ.ನಾಯ್ಕ ಅಭಿಮಾನಿ ಬಳಗ ಎನ್ನುವ ಟಿ.ಶರ್ಟ್ ತೊಟ್ಟ ಯುವಕರು ಎಲ್ಲರ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News