×
Ad

ಸೌದಿ ಅರೆಬಿಯಾದಲ್ಲಿ ಉದ್ಯೋಗ ವಂಚಿತ ಭಾರತೀಯರ ಶೀಘ್ರ ವಾಪಾಸಾತಿಗೆ ಸರಕಾರ ಮುಂದಾಗಲಿ: ಪಿ.ಕೆ. ಕುಂಞಾಲಿಕುಟ್ಟಿ

Update: 2016-08-01 19:10 IST

ಮಂಗಳೂರು,ಆ.1 : ಸೌದಿ ಅರೆಬಿಯಾದಲ್ಲಿ ನೌಕರಿ ಕಳೆದುಕೊಂಡಿರುವ ಭಾರತೀಯ ಕಾರ್ಮಿಕರನ್ನು ಅತೀ ಶೀಘ್ರವಾಗಿ ವಾಪಸ್ ಕರೆಸಿಕೊಳ್ಳುವ ಕಾರ್ಯ ತುರ್ತಾಗಿ ನಡೆಯಬೇಕು ಮತ್ತು ರಾಜ್ಯ ಸರ್ಕಾರಗಳು ಕೆಲಸ ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಬೇಕು ಎಂದು ಕೇರಳದ ಶಾಸಕ ಪಿ.ಕೆ. ಕುಂಞಾಲಿಕುಟ್ಟಿ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸೌದಿ ಅರೇಬಿಯಾದಲ್ಲಿ ನಿರ್ಮಾಣ ಕಂಪೆನಿಯೊಂದರ 10 ಸಾವಿರ ಭಾರತೀಯ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೆಸೆದಿದ್ದು, ಅವರಲ್ಲಿ ಕರ್ನಾಟಕ ಮತ್ತು ಕೇರಳದ ಸುಮಾರು ಎರಡು ಸಾವಿರದಷ್ಟು ಇದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.

ಅಂದಾಜು 200 ರಷ್ಟು ವಿದೇಶಿ ಕಂಪೆನಿಗಳು ಮುಚ್ಚುವ ಭೀತಿಯಲ್ಲಿದ್ದು, ಹುದ್ದೆಕಳೆದುಕೊಳ್ಳುವವರ ಸಂಖ್ಯೆ ಏರಿಕೆಯಾಗಲಿದೆ. ಹೀಗಾಗಿ ಆಯಾಯ ರಾಜ್ಯ ಸರ್ಕಾರಗಳು ಹೆಲ್ಪ್‌ಡೆಸ್ಕ್‌ನ್ನು ಆರಂಭಿಸಬೇಕು. ಅಲ್ಲಿ ಸಿಲುಕಿರುವ ತಮ್ಮ ರಾಜ್ಯ ಸಂತ್ರಸ್ಥರ ಪುನರ್ವಸತಿ ಕಾರ್ಯಕ್ಕೆ ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಕೇರಳ ಸರ್ಕಾರ ಈಗಾಗಲೇ ಸಂತ್ರಸ್ಥ ಕಾರ್ಮಿಕರೊಂದಿಗೆ ಸಂಪರ್ಕದಲ್ಲಿದೆ. ಮಲಯಾಳಿ ಸಂಘಗಳು ಅವರ ನೆರವಿಗೆ ಸ್ಪಂದಿಸುತ್ತಿವೆ .ಕೆಲಸ ಕಳೆದುಕೊಂಡವರಲ್ಲಿ ಹೆಚ್ಚಿನವರು ಉತ್ತರ ಭಾರತದ ನಾಗರಿಕರು. ಸುಮಾರು ಒಂದು ಸಾವಿರದಷ್ಟು ಕೇರಳ ರಾಜ್ಯದ ನಾಗರಿಕರಿದ್ದು, ಅಷ್ಟೇ ಸಂಖ್ಯೆಯ ಕನ್ನಡಿಗರೂ ಇರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಕೇರಳ ಸರ್ಕಾರ ಈಗಾಗಲೇ ಸಂತ್ರಸ್ತರನ್ನು ಭಾರತಕ್ಕೆ ವಾಪಸ್ ಕರೆತರುವ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಈ ಕುರಿತು ಕೇರಳ ಮುಖ್ಯಮಂತ್ರಿಯ ಜತೆ ಮಾತುಕತೆ ನಡೆದಿದ್ದು, ಅಲ್ಲಿನ ಮುಸ್ಲಿಂ ಸಂಘಟನೆಗಳ ಸಹಕಾರ ಪಡೆಯಲಾಗುತ್ತಿದೆ ಎಂದು ಹೇಳಿದರು.

ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡವರಿಗೆ ನೀರು, ಆಹಾರದ ತೀವ್ರ ಅಭಾವ ಉಂಟಾಗಿದ್ದು, ಅವರು ವಾಸಿಸುತ್ತಿರುವ ವಾತಾವರಣವೂ ಮಲಿನವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅವರಿಗೆ ಕಂಪೆನಿಯಿಂದ ಸರಿಯಾದ ವೇತನ ಸಿಕ್ಕಿಲ್ಲ. ಕೂಡಲೆ ಅವರನ್ನು ಕರೆತರದೆ ಇದ್ದರೆ ಸಮಸ್ಯೆ ಇನ್ನಷ್ಟು ಹದಗೆಡಲಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳಲ್ಲಿ ಸಹಾಯವಾಣಿಯನ್ನು ಆರಂಭಿಸಿ, ಎಲ್ಲ ರಾಜ್ಯ ಸರ್ಕಾರಗಳ ಸಂಯೋಜನೆಯಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಬೇಕು ಎಂದು ಕುಂಞಕುಟ್ಟಿ ಸಲಹೆ ನೀಡಿದರು.

ಈಗ ಎದುರಾಗಿರುವುದು ಅತ್ಯಂತ ತುರ್ತು ಪರಿಸ್ಥಿತಿ. ಒಂದು ದಿನ ವಿಳಂಬ ಮಾಡದಂತೆ ಕೆಲಸ ಮಾಡಬೇಕು. ಕೇಂದ್ರ ಸಚಿವರು ಈಗಾಗಲೇ ಸೌದಿ ಅರೇಬಿಯಾದಲ್ಲಿದ್ದಾರೆ. ಆದರೆ ಚುರುಕಿನ ಕಾರ್ಯಾಚರಣೆ ಕಂಡುಬಂದಿಲ್ಲ. ಯುಪಿಎ ಸರ್ಕಾರವಿದ್ದಾಗ ಇಂತಹ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಇತ್ಯರ್ಥಪಡಿಸುತ್ತಿತ್ತು. ಅಂತಹ ಯುದ್ಧೋಪಾದಿಯ ಕೆಲಸ ಈಗ ಎನ್‌ಡಿಎ ಸರ್ಕಾರದಿಂದ ನಡೆಯಬೇಕಾಗಿದೆ ಎಂದರು.

  ಎಲ್ಲ ಸಂತ್ರಸ್ತರನ್ನು ಭಾರತಕೆ ಮರಳಿ ಕರೆತರುವುದಷ್ಟೇ ಅಲ್ಲ, ಅವರಿಗೆ ಇಲ್ಲಿ ಸರಿಯಾದ ಪುನರ್ವಸತಿ ಸೌಕರ್ಯಗಳನ್ನು ಕಲ್ಪಿಸಬೇಕು. ಸೌದಿ ಅರೇಬಿಯಾದ ಕಂಪೆನಿಯಿಂದ ಅವರಿಗೆ ಸಿಗಬೇಕಾದ ಸಂಪೂರ್ಣ ವೇತನ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಮಂಜೇಶ್ವರ ಶಾಸಕ ಅಬ್ದುಲ್‌ ರಜಾಕ್, ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News