×
Ad

ಪುತ್ತೂರು:ಬಿಜೆಪಿ ಮಂಡಲ ಕಾರ್ಯಕಾರಣಿ ಸಭೆ

Update: 2016-08-01 19:25 IST

ಪುತ್ತೂರು,ಆ.1: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಪುತ್ತೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಇಂದಿನ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಕೇವಲ ಅನುದಾನದ ಭರವಸೆಗಳು ಮಾತ್ರ ಸಿಗುತ್ತಿದೆಯೇ ಹೊರತು ಅಭಿವೃದ್ಧಿ ಶೂನ್ಯವಾಗಿದೆ .ಈಗಿನ ಸಚಿವರು, ಅವರ ಮನೆಯವರು ,ಮಕ್ಕಳು ಭ್ರಷ್ಟಾಚಾರದ ಮೂಲಕ ಕೋಟಿ ಯೋಜನೆಯನ್ನು ಕೊಲ್ಲೆ ಹೊಡೆಯುವುದು ಹೇಗೆ ಎಂದು ಯೋಜನೆ ಹಾಕುತ್ತಿದ್ದಾರೆಯೇ ಹೊರತು ಬೇರೇನೂ ಮಾಡುತ್ತಿಲ್ಲ. ಗೃಹ ಸಚಿವರು ಬದಲಾದ ಮೇಲೆ ನೆಮ್ಮದಿ ಇರಬಹುದು ಎಂದು ಭಾವಿಸಿದರೆ ಅಧಿಕಾರಿಗಳಿಗೆ ನೇಣು ಭಾಗ್ಯ ಕರುಣಿಸಿ ಮತ್ತಷ್ಟು ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಆರೋಪಿಸಿದರು.
 ಪುತ್ತೂರಿನ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಬಿಜೆಪಿ ಪುತ್ತೂರು ಮಂಡಲದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಪುತ್ತೂರಿನಲ್ಲಿ ಮಿನಿ ವಿಧಾನ ಸೌಧ, ಹೈಟೆಕ್ ಬಸ್‌ಸ್ಟೇಂಡ್, ಮೋರಾರ್ಜಿ ದೇಸಾಯಿ ಶಾಲೆ, ಹಾರಾಡಿ -ಉಪ್ಪಿನಂಗಡಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆಗೆ ಸಾಕಷ್ಟು ಅನುದಾನಗಳು, ದೇವಸ್ಥಾನ, ದೈವಸ್ಥಾನಗಳಿಗೆ ಸುಮಾರು ರೂ. 1.5 ಕೋಟಿಯಷ್ಟು ಅನುದಾನ ಅಂದಿನ ಮುಜರಾಯಿ ಸಚಿವ ಕೋಟ ಶ್ರೀನವಾಸ ಪೂಜಾರಿ ಅವರ ಮೂಲಕ ಅನುದಾನ ಹರಿದು ಬಂದಿತ್ತು ಎಂದು ಅವರು ತಿಳಿಸಿದರು.
 ಬೂತ್ ಮಟ್ಟದಿಂದ ರಾಷ್ಟ್ರಮಟ್ಟದ ತನಕ ಅಧಿಕಾರ ಹಂಚಿಕೆ ಮಾಡುವಲ್ಲಿ ದೇಶದ ನಂಬರ್ ಒನ್ ಸಂಘಟನೆಯಿದ್ದರೆ ಅದು ಬಿಜೆಪಿ ಮಾತ್ರ . ಮೂರು ವರ್ಷಗಳಿಗೊಮ್ಮೆ ಅಧಿಕಾರ ಹಂಚಿಕೆ ಮಾಡುವ  ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಡುವುದು ಬಿಜೆಪಿ ಮಾತ್ರ ಎಂದ ಅವರು ನಾವೆಲ್ಲ ದೇಶದ ಅಭಿವೃದ್ಧಿಯನ್ನೇ ಚಿಂತಿಸುವವರಾಗಿದ್ದು, ಅಭಿವೃದ್ಧಿ ಮತ್ತು ರಾಷ್ಟ್ರೀಯತೆ ವಿಚಾರದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಇದನ್ನು ಕಾರ್ಯಕರ್ತರು, ಜನಪ್ರತಿನಿಧಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
   ಹಿಂದೆ ದೇಶಕ್ಕೆ ಭವಿಷ್ಯ ಇಲ್ಲವೆಂಬಂತೆ ಮೌನ ಪ್ರಧಾನಿಯೊಬ್ಬರು ಇದ್ದರು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶಕ್ಕೆ ಉಜ್ವಲ ಭವಿಷ್ಯ ಬರತೊಡಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ವಿಜ್ಞಾನವನ್ನು ಅತ್ಯಂತ ಹೆಚ್ಚು ಬಳಕೆ ಮಾಡಿ. ಆಂದೋಲನ ರೀತಿಯಲ್ಲಿ ದೇಶದ 125 ಕೋಟಿ ಜನರನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡುವ ಯೋಜನೆಯನ್ನು ಮೋದಿ ಅವರು ಮಾಡಿದ್ದಾರೆ.ಬಹಳಷ್ಟು ಅನುದಾನ ಒದಗಿಸುವ ಮೂಲಕ ಅಭಿವೃದ್ದಿಗೆ ಅವರು ವೇಗ ನೀಡಿದ್ದಾರೆ ಎಂದರು. ಇತ್ತೀಚೆಗೆ ನಿತಿನ್ ಗಡ್ಕರಿ ಅವರು ದ.ಕ.ಜಿಲ್ಲೆಯಲ್ಲಿ ಸಂಪಾಜೆ, ಗುತ್ತಿಗಾರು, ಸುಬ್ರಹ್ಮಣ್ಯ ರಸ್ತೆ, ಗುರುವಾಯನಕೆರೆ ಉಡುಪಿ ರಸ್ತೆ, ಪೊಳಲಿ ಕಟೀಲು ರಸ್ತೆ ಸೇರಿದಂತೆ ವಿವಿಧ ರಸ್ತೆಗಳನ್ನು ಚತುಷ್ಪತ ರಸ್ತೆ ಮಾಡಲು ರೂ. 10ಸಾವಿರ ಕೋಟಿ ಅನುದಾವನ್ನು ಏಕಕಾಲದಲ್ಲಿ ಕೊಡಿಸಿದ್ದಾರೆ. ಕಾಮಗಾರಿಗೆ ಡಿಪಿಆರ್ ಕೂಡಾ ಆಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಸಮಯದಲ್ಲಿ ಮಾತ್ರ ಪಕ್ಷದ ಕೆಲಸವಲ್ಲ:
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿ ಪಕ್ಷದ ಜನಪ್ರತಿನಿಧಿಗಳು ಸಮಿತಿ ಪದಾಧಿಕಾರಿಗಳ ಸಂಪರ್ಕದಲ್ಲಿರಬೇಕು. ಆ ಮೂಲಕ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಚುನಾವಣಾ ಸಮಯದಲ್ಲಿ ಮಾತ್ರ ಪಕ್ಷದ ಕೆಲಸ ಮಾಡುವುದಲ್ಲ ಎಂದರು.
  ಪಕ್ಷದ ವಿಭಾಗ ಸಂಘಟಕ ಪ್ರಸಾದ್ ಕುಮಾರ್ ಬೆಳ್ತಂಗಡಿ ಮತ್ತು ಸಹ ಸಂಘಟಕ ಯತೀಶ್ ಅವರು ಗೋಷ್ಠಿ ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಉಪಾಧ್ಯಕ್ಷೆ ಶೈಲಜಾ ಭಟ್, ಪುತ್ತೂರು ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ಬಿಜೆಪಿ ರಾಜ್ಯ ಯುವಮೋರ್ಚಾದ ಉಪಾಧ್ಯಕ್ಷ ಶಿವರಂಜನ್ ಮತ್ತಿತರರು ಇದ್ದರು. ಉಷಾ ನಾರಾಯಣ ಪ್ರಾರ್ಥಿಸಿದರು. ಶಂಭು ಭಟ್ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಬಜತ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News