×
Ad

ಭಟ್ಕಳ ಬಿಜೆಪಿಯಲ್ಲಿ ಭಿನ್ನಮತದ ಹೊಗೆ; ಬಿಜೆಪಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

Update: 2016-08-01 19:52 IST

ಭಟ್ಕಳ,ಆ.1: ತಾಲೂಕಿನ ಭಾರತೀಯ ಜನತಾ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಪಕ್ಷದ ಸಂಘಟನೆ, ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲೂ ಹಿರಿಯರನ್ನು ದೂರ ಇಡಲಾಗಿದೆ ಅದಕ್ಕಾಗಿ ಬಿಜೆಪಿಯನ್ನು ರಕ್ಷಿಸುವ ಉದ್ದೇಶದಿಂದ ನೂತನವಾಗಿ ಬಿಜೆಪಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು  ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಹಿತರಕ್ಷಣಾ ವೇದಿಕೆಯ ಪ್ರಮುಖ ಎ.ಎನ್.ಪೈ ಹೇಳಿದರು.

 ಸುದ್ದಿಗಾರರ ಜೊತೆ ಮಾತನಾಡಿದ ಅವರು ಭಟ್ಕಳದಲ್ಲಿ ಬಿಜೆಪಿ ಪಕ್ಷಕ್ಕಾಗಿ ದುಡಿದ ಅನೇಕ ಹಿರಿಯ ಮುಖಂಡರಿದ್ದಾರೆ. ಆದರೆ ಇವರನ್ನು ಪಕ್ಷದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಿರಿಯರ ಅಭಿಪ್ರಾಯ ಸಂಗ್ರಹಿಸದೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳ ಆಯ್ಕೆಯಲ್ಲಿ ಹಿರಿಯರಿಗೆ ಯಾವುದೇ ಸ್ಥಾನಮಾನ ನೀಡದೇ ಕಡೆಗಣಿಸಿರುವುದು ಎಲ್ಲಾ ಹಿರಿಯರಿಗೆ ನೋವು ತಂದಿದೆ ಎಂದ ಅವರು ಹಳೆಯ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಬದಲು ಬೇರೆ ಪಕ್ಷದವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ. ಹೊಸಬರು ಸೇರುವುದಕ್ಕೆ ನಮ್ಮದೇನೋ ಆಕ್ಷೇಪವಿಲ್ಲ.ಆದರೆ ಹಿರಿಯ ಮುಖಂಡರು, ಕಾರ್ಯಕರ್ತರ ಮಾತಿಗೆ ಇಲ್ಲಿ ಬೆಲೆ ಇಲ್ಲವಾಗಿದೆ ಎಂದೂ ದೂರಿದರು.

 ಹಲವು ವರ್ಷಗಳಿಂದ ಹಿಂದುತ್ವಕ್ಕಾಗಿ ಹೋರಾಟ ಮಾಡಿದ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕರನ್ನು ಸೇರಿಸಿಕೊಂಡ ದಿನವೇ ಪಕ್ಷದಿಂದ ಹೊರಗೆ ಕಳುಹಿಸಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಬಿಜೆಪಿ ಎಲ್ಲರ ಪಕ್ಷವಾಗಿದೆ. ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ನಿಷ್ಟಾವಂತ ಕಾರ್ಯಕರ್ತರು ಮತ್ತು ಹಿರಿಯರ ಪರಿಶ್ರಮವಿದೆ. ಹೀಗಾಗಿ ಇಲ್ಲಿ ಎಲ್ಲಾ ಸಮುದಾಯದ ಜನರಿಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕಾಗಿದೆ. ಪಕ್ಷದ ಹಿತದೃಷ್ಟಿಯಿಂದ ಮೂಲ ಕಾರ್ಯಕರ್ತರನ್ನು ಎಂದಿಗೂ ಮರೆಯದೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡಬೇಕಾಗಿದೆ ಎಂದ ಅವರು ನಾವು ಎಂದಿಗೂ ಬಿಜೆಪಿಯವರೇ. ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾದಲ್ಲಿ ಪಕ್ಷದ ಮೂಲ ಕಾರ್ಯಕರ್ತರನ್ನು, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.

ಹಿರಿಯ ಮುಖಂಡ ಎಂ.ವಿ. ಹೆಬಳೆ ಮಾತನಾಡಿ ಬಿಜೆಪಿಯಲ್ಲಿ ಚಿತ್ತರಂಜನ್ ನೆನಪು ಇಂದು ಯಾರಿಗೂ ಇಲ್ಲವಾಗಿದೆ. ಪಕ್ಷಕ್ಕಾಗಿ ಕೊಲೆಯಾದ ಚಿತ್ತರಂಜನ್‌ರನ್ನು ಮರೆತಿರುವುದು ನೋವು ತಂದಿದೆ. ಹಿರಿಯರನ್ನು ಕಡೆಗಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಸಂಘಟನೆ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಪಕ್ಷದಲ್ಲಿ ದುಡಿದ ಹಿರಿಯರಿಗೆ ಸಂಘಟನೆಯಲ್ಲಿ ಪ್ರಮುಖ ಸ್ಥಾನ ನೀಡುವಂತಾಗಬೇಕು. ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಯಾವುದೇ ಮಹತ್ವದ ವಿಚಾರದ ಸಂದರ್ಭದಲ್ಲಿ ಹಿರಿಯರ ಅಭಿಪ್ರಾಯ, ಮಾರ್ಗದರ್ಶನ ಪಡೆಯುವಂತಾಗಬೇಕು ಎಂದು ಒತ್ತಾಯಿಸಿದರು.

  ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಮತ್ತು ನ್ಯಾಯವಾದಿ ದತ್ತಾತ್ರಯ ನಾಯ್ಕ ಮಾತನಾಡಿ ನಾವೆಲ್ಲರೂ ಬಿಜೆಪಿಗರೇ ಆಗಿದ್ದೇವೆ. ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಬಾರದು ಎಂದು ಬಿಜೆಪಿ ಹಿತರಕ್ಷಣಾ ವೇದಿಕೆಯನ್ನು ಹುಟ್ಟು ಹಾಕಿದ್ದೇವೆ. ಇನ್ನು ಮುಂದಾದರೂ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಜಾಲಿ ಪಂ.ಪಂ.ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಮೂರು ಸ್ಥಾನ ಬಿಜೆಪಿ ಗೆಲ್ಲಲು ಸಾಧ್ಯವಿತ್ತು ಎಂದರು. ಶಿವುಕುಮಾರ ಮುರ್ಡೇಶ್ವರ, ರವೀಂದ್ರ ನಾಯ್ಕ, ರಮೇಶ ನಾಯ್ಕ ಹುರುಳಿಸಾಲ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News