×
Ad

ಶಾಲೆಗೆ ನುಗ್ಗಿದ ಶ್ರೀರಾಮಸೇನೆ : ಡಿವೈಎಫ್‌ಐ ಖಂಡನೆ

Update: 2016-08-01 20:13 IST

 ಮಂಗಳೂರು , ಆ.1:ನಗರ ಹೊರವಲಯದ ನೀರ್‌ಮಾರ್ಗ ಸಮೀಪದ ಪಡು ಬೊಂಡಂತಿಲ ಎಂಬಲ್ಲಿ ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರೇಬಿಕ್ ಭಾಷೆಯನ್ನು ಕಲಿಸುವುದನ್ನು ಸಹಿಸಲಾಗದ ಶ್ರೀರಾಮಸೇನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆಯನ್ನು ಡಿವೈಎಫ್‌ಐ ವಾಮಂಜೂರು ಪ್ರದೇಶ ಸಮಿತಿ ತೀವ್ರವಾಗಿ ಖಂಡಿಸಿದೆ.

      ಡಿವೈಎಫ್‌ಐನ ನಿಯೋಗವು ಇಂದು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಪರಾಮರ್ಶಿಸಿತು. ಶಾಲೆಯು ಆಸಕ್ತ ವಿದ್ಯಾರ್ಥಿಗಳಿಗೆ ಈಗಾಗಲೇ ಜರ್ಮನ್, ಫ್ರೆಂಚ್ ಭಾಷಾ ತರಬೇತಿಯನ್ನು, ಕರಾಟೆ ತರಬೇತಿಯನ್ನು ಉಚಿತವಾಗಿ ನೀಡಿದ್ದು ನಂತರದಲ್ಲಿ ಈಗ ಶಾಲಾ ಸಮಯಕ್ಕೆ ಮುಂಚಿತವಾಗಿ ಅರೇಬಿಕ್ ಭಾಷೆಯನ್ನು ಕಲಿಸಲಾಗುತ್ತಿದೆ. ಶಾಲಾ 160 ವಿದ್ಯಾರ್ಥಿಗಳ ಪೈಕಿ ಹಲವು ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಈ ತರಗತಿಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಕಾಡುವ ನಿರುದ್ಯೋಗದಿಂದ ಬೇಸತ್ತ ಯುವಜನರು ವಿದೇಶಗಳಿಗೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಸಹಕಾರಿಯಾಗಲೆಂದು ಭವಿಷ್ಯದ ಕಣ್ಣೋಟದಿಂದ ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದು ತಾನು ಬಯಸಿದ ಭಾಷೆಯನ್ನು ಕಲಿಯುವ ಹಕ್ಕನ್ನು ಭಾರತ ಸಂವಿಧಾನವು ನೀಡಿದೆ.
 ಹಾಗಾಗಿ ಅರೇಬಿಕ್ ಭಾಷಾ ಕಲಿಕೆಯನ್ನು ವಿರೋಧಿಸಿ ಶ್ರೀರಾಮ ಸೇನೆಯ ಜಿಲ್ಲಾ ಮುಖಂಡ ಅಡ್ಯಾರ್ ಆನಂದ ಶೆಟ್ಟಿಯ ನೇತೃತ್ವದಲ್ಲಿ ಈ ದಾಳಿಯು ನಡೆದಿದ್ದು ಈಗ ತಲೆಮರೆಸಿಕೊಂಡಿರುವ ಅಡ್ಯಾರ್ ಆನಂದ ಶೆಟ್ಟಿ ಮತ್ತು ಇತರರನ್ನು ತಕ್ಷಣ ಬಂಧಿಸಬೇಕೆಂದು ಡಿವೈಎಫ್‌ಐ ಒತ್ತಾಯಿಸಿದೆ.
  ನಿಯೋಗದಲ್ಲಿ ಡಿವೈಎಫ್‌ಐನ ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಮನೋಜ್ ವಾಮಂಜೂರು, ಕಾರ್ಮಿಕ ಮುಖಂಡರಾದ ಕೆ. ಗಂಗಯ್ಯ ಅಮೀನ್, ಡಿವೈಎಫ್‌ಐನ ವಾಮಂಜೂರು ಪ್ರದೇಶ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಅಮೀನ್, ಕಾರ್ಯದರ್ಶಿ ದಿನೇಶ್ ಬೊಂಡಂತಿಲ ಹಾಗೂ ಡಿವೈಎಫ್‌ಐ ಮುಖಂಡ ಅಶೋಕ್ ತಾರಿಗುಡ್ಡ, ಪ್ರವೀಣ್ ತಾರಿಗುಡ್ಡ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News