×
Ad

ದುಡಿಯುವ ಮಹಿಳೆಯರ ದ.ಕ. ಜಿಲ್ಲಾ ಸಮಾವೇಶ ಉದ್ಘಾಟನೆ

Update: 2016-08-01 21:15 IST

 ಮಂಗಳೂರು,ಆ.1:ಕಾರ್ಮಿಕ ವರ್ಗದ ಅವಿಭಾಜ್ಯ ಅಂಗವಾಗಿರುವ ದುಡಿಯುವ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರಕಾರಗಳ ತಪ್ಪು ನೀತಿಗಳಿಂದಾಗಿ ಕಾರ್ಮಿಕ ವರ್ಗ ತತ್ತರಿಸುವಾಗ ಮಹಿಳಾ ಕಾರ್ಮಿಕರಂತೂ ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಈ ಕಾರಣದಿಂದ ದುಡಿಯುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಮುಖಂಡೆ, ದುಡಿಯುವ ಮಹಿಳೆಯರ ಸಮನ್ವಯ ಸುತಿಯ ರಾಜ್ಯ ಸಹಸಂಚಾಲಕಿ ಸುನಂದಾ ಎಚ್.ಎಸ್ ಹೇಳಿದರು.
  ಅವರು ಇತ್ತೀಚೆಗೆ ನಗರದ ಬೋಳಾರದಲ್ಲಿ ಸಿಐಟಿಯು ನೇತೃತ್ವದಲ್ಲಿ ಜರುಗಿದ ದುಡಿಯುವ ಮಹಿಳೆಯರ ದ.ಕ. ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

  ಮಹಿಳಾ ಕಾರ್ಮಿಕರ ಮೇಲಿನ ಶೋಷಣೆ ವ್ಯಾಪಕಗೊಳ್ಳುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಗಗನ ಕುಸುಮವಾಗಿದೆ. ಮಾತ್ರವಲ್ಲದೆ ಪುರುಷ ಹಾಗೂ ಮಹಿಳಾ ಕಾರ್ಮಿಕರ ಮಧ್ಯೆ ತಾರತಮ್ಯವೆಸಗಲಾಗುತ್ತಿದೆ. ಕೂಲಿ ಕೆಲಸ ಮಾಡುವವರಿಂದ ಹಿಡಿದು ಸರಕಾರಿ, ಖಾಸಗೀ ಕಚೇರಿಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು, ನೌಕರರ ಮಧ್ಯೆ ಲೈಂಗಿಕ ಶೋಷಣೆವೆಂಬುದು ಪೆಡಂಭೂತವಾಗಿ ಕಾಡುತ್ತಿದೆ. ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ರಕ್ಷಣೆಯೂ ಇಲ್ಲವಾಗಿದೆ. ಮಹಿಳಾ ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡದೆ ಗುಲಾಮರಂತೆ ದುಡಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ದುಡಿಯುವ ಮಹಿಳೆಯರು ಸಂಘಟಿತ ಶಕ್ತಿಯಾಗಿ ಮಹಿಳಾ ಶೋಷಣೆ, ಅಸಮಾನತೆ, ದೌರ್ಜನ್ಯಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕೆಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಬಿ. ಶೆಟ್ಟಿಯವರು ವಹಿಸಿದ್ದರು.
    ಕಾರ್ಯಕ್ರಮದಲ್ಲಿ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕಿ ಪದ್ಮಾವತಿ ಎಸ್. ಶೆಟ್ಟಿ , ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಹೇಮಲತಾ, ಎಲ್‌ಐಸಿ ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ನಾಯಕಿ ಶೋಭಾ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News